ಸಮೀಪದ ಅಬ್ಬಿಗೇರಿಯಲ್ಲಿ ಪ್ರಸಿದ್ಧ ಶ್ರೀ ಬಯಲು ಬಸವೇಶ್ವರ (ಕಂಠಿ ಬಸವೇಶ್ವರ) ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ಕೃಷ್ಣಪಕ್ಷದ ಪುನರ್ವಸು ನಕ್ಷತ್ರದ ಶುಭ ಯೋಗದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ನರೇಗಲ್ಲ
ಸಮೀಪದ ಅಬ್ಬಿಗೇರಿಯಲ್ಲಿ ಪ್ರಸಿದ್ಧ ಶ್ರೀ ಬಯಲು ಬಸವೇಶ್ವರ (ಕಂಠಿ ಬಸವೇಶ್ವರ) ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ಕೃಷ್ಣಪಕ್ಷದ ಪುನರ್ವಸು ನಕ್ಷತ್ರದ ಶುಭ ಯೋಗದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಯಲು ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಲಾಯಿತು. ಗ್ರಾಮದ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ ಸಾವಿರಾರು ಧರ್ಮಪ್ರಿಯರು ಸ್ವಾಮಿಯ ದರ್ಶನ ಪಡೆದು ಧನ್ಯತೆ ಅನುಭವಿಸಿದರು.
ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ ಹಾಗೂ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಕಲ ವಾದ್ಯಮೇಳಗಳೊಂದಿಗೆ ಅತ್ಯಂತ ವೈಭವದಿಂದ ಜರುಗಿತು. ಕಳಸ ಮತ್ತು ಪಲ್ಲಕ್ಕಿ ಮೆರವಣಿಗೆಯ ನಂತರ, ಗ್ರಾಮದ ಗುರು-ಹಿರಿಯರ ಸಮ್ಮುಖದಲ್ಲಿ ಬಯಲು ಬಸವೇಶ್ವರನ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ಎಳೆಯುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ರಥೋತ್ಸವ ಸಾಗುವ ಹಾದಿಯುದ್ದಕ್ಕೂ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಈ ವೈಭವೋಪೇತ ರಥೋತ್ಸವದಲ್ಲಿ ಅಬ್ಬಿಗೇರಿ ಸೇರಿ ನರೇಗಲ್, ಕೋಡಿಕೊಪ್ಪ, ಕೋಚಲಾಪುರ, ಸವಡಿ, ಜಕ್ಕಲಿ, ರೋಣ, ಬೂದಿಹಾಳ, ತೋಟಗಂಟಿ ಹಾಗೂ ಮಲ್ಲಾಪುರ ಸೇರಿ ಸುತ್ತಮುತ್ತಲಿನ ಹಲವು ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.