ಯಲ್ಲಾಪುರ: ಸಮಾಜದಲ್ಲಿ ಇತರರಿಗಾಗಿ ಯಾರು ಬದುಕುವರೋ ಅವರು ಶ್ರೇಷ್ಠ ಮನುಜರಾಗುತ್ತಾರೆ. ತನಗಾಗಿ ಬದುಕುವ ಮನುಷ್ಯನಲ್ಲ ಎನ್ನಬಹುದು. ಭಾರತ ಧರ್ಮದ ನೆಲೆಯಲ್ಲಿ ಸಾಗಬೇಕಾಗಿದೆ. ಭಾರತ ಉಳಿದರೆ ಮಾತ್ರ ಪ್ರಪಂಚದ ಎಲ್ಲ ದೇಶಗಳೂ ಉಳಿದೀತು. ಆದರೆ ಇಂದಿನ ಸ್ಥಿತಿ ಹೀಗೆಯೇ ಮುಂದುವರಿದರೆ ಈ ದೇಶದಲ್ಲಿ ನಿರಾಶ್ರಿತರಾಗಿ ಬದುಕುವ ಕಾಲ ಬಂದೀತು ಎಂದು ತುಮಕೂರಿನ ರಾಮಕೃಷ್ಣ ಮಠದ ಡಾ. ವೀರೇಶಾನಂದ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.ಜ. ೫ರಂದು ತಾಲೂಕಿನ ಆನಗೋಡು ಗ್ರಾಪಂ ವ್ಯಾಪ್ತಿಯ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮಾಜಿಕ ಕಾರ್ಯಕರ್ತ ಗಣಪತಿ ಮಾನಿಗದ್ದೆಯವರ ಷಷ್ಟ್ಯಬ್ಧಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮಗಳ ನಂತರ ಸಂಜೆ ನಡೆದ ಧರ್ಮ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಗಣಪತಿ ಮಾನಿಗದ್ದೆ ದಂಪತಿಗಳನ್ನು ಸನ್ಮಾನಿಸಿ, ಆಶೀರ್ವಚನ ನೀಡಿದರು.ದೇಶದಲ್ಲಿ ಹಿಂದೂಗಳಾಗಿ ಹುಟ್ಟಿರುವುದು ಒಂದು ಭಾಗ್ಯ. ಆದರೆ ನಮ್ಮನ್ನಾಳುವ ದೇಶದ ಪ್ರಮುಖರಿಗೆ ಇದು ಅರ್ಥವಾಗುತ್ತಿಲ್ಲ. ಇದನ್ನು ಅರ್ಥ ಮಾಡಿಸುವುದು ಹೇಗೆ ಎಂಬ ಜಿಜ್ಞಾಸೆ ನಮ್ಮೆಲ್ಲರನ್ನೂ ಕಾಡುತ್ತಿದೆ ಎಂದ ಶ್ರೀಗಳು, ಸ್ವಾತಂತ್ರ್ಯಾ ನಂತರ ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ಮನುಷ್ಯತ್ವವನ್ನು ರೂಪಿಸುವ ಬದಲಿಗೆ ಕೇವಲ ಪದವಿ ಗಳಿಕೆಗೆ ಸೀಮಿತಗೊಳಿಸುತ್ತಿದೆ. ನಾವು ಭಾರತೀಯ ಮೌಲ್ಯ, ಹಿರಿಮೆ, ಸನಾತನ ಸಂಸ್ಕೃತಿಯ ಅರಿವು ಪಡೆಯುವಲ್ಲಿ ಸಫಲರಾಗುತ್ತಿಲ್ಲ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮಾನಿಗದ್ದೆಯವರು ಪ್ರೌಢಶಿಕ್ಷಣದ ನಂತರ ಆರ್‌ಎಸ್ಎಸ್ ಕಾರ್ಯಕರ್ತರಾಗಿ ಕಳೆದ ೪೫ ವರ್ಷಗಳಿಂದ ಹತ್ತಾರು ಹೊಣೆಗಾರಿಕೆ ನಿರ್ವಹಿಸಿ, ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ಮಾಡಿ, ಸಮಾಜಮುಖಿಯಾಗಿ ಆದರ್ಶ ಕುಟುಂಬ ನಿರ್ವಹಿಸುವ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿದ ಗಣಪತಿ ಮಾನಿಗದ್ದೆ ಮಾತನಾಡಿ, ನಾನು ಸದಾ ಕಾರ್ಯಕರ್ತನಾಗಿ ಇದ್ದೇನೆ. ಮುಂದೆಯೂ ಸಮಾಜಮುಖಿಯಾಗಿದ್ದು, ನನ್ನ ಶಕ್ತಿ ಮೀರಿ, ಸಮಾಜಕ್ಕೆ ಒಳಿತಾದ ಕಾರ್ಯ ಮಾಡುವ ನೆಲೆಯಲ್ಲಿ ಚಿಂತನೆ ಹೊಂದಿದ್ದೇನೆ ಎಂದರು.ಅಭಿನಂದನಾ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಭಟ್ಟ ಗೂಡೆಪಾಲ ಉಪಸ್ಥಿತರಿದ್ದರು. ಉಪನ್ಯಾಸಕಿ ಚಂದ್ರಕಲಾ ಪಟಗಾರ ಸನ್ಮಾನ ಪತ್ರ ವಾಚಿಸಿದರು. ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಯತಿದ್ವಯರನ್ನು ಪರಿಚಯಿಸಿದರು. ಗಣೇಶ ಹೆಗಡೆ ನೆರ್ಲೆಮನೆ ಮತ್ತು ಸದಾನಂದ ದಬಗಾರ ಪ್ರಾರ್ಥನೆ ಮತ್ತು ಭಜನೆ ನಡೆಸಿಕೊಟ್ಟರು. ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಶಿಕ್ಷಕ ಸತೀಶ ಯಲ್ಲಾಪುರ ನಿರ್ವಹಿಸಿ, ವಂದಿಸಿದರು.