ದೊಡ್ಡಬಳ್ಳಾಪುರದಲ್ಲಿ ಬೃಹತ್ ಶೋಭಾಯಾತ್ರೆ ಸಂಭ್ರಮ

KannadaprabhaNewsNetwork |  
Published : Mar 30, 2026, 01:30 AM IST
 ದೊಡ್ಡಬಳ್ಳಾಪುರದಲ್ಲಿ ನಡೆದ ಬೃಹತ್ ಶ್ರೀರಾಮ ಶೋಭಾಯಾತ್ರೆಯಲ್ಲಿ ಸಹಸ್ರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ದೊಡ್ಡಬಳ್ಳಾಪುರ ಪ್ರಖಂಡದ ನೇತೃತ್ವದಲ್ಲಿ ಭಾನುವಾರ ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಿತು

ದೊಡ್ಡಬಳ್ಳಾಪುರ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ದೊಡ್ಡಬಳ್ಳಾಪುರ ಪ್ರಖಂಡದ ನೇತೃತ್ವದಲ್ಲಿ ಭಾನುವಾರ ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಿತು.

ಸಹಸ್ರಾರು ಹಿಂದೂ ಕಾರ್ಯಕರ್ತರು ಸಂಭ್ರಮದ ಮೆರವಣಿಗೆಯಲ್ಲಿ ಭಾಗಿಯಾಗಿ ಕೇಸರಿ ಹಬ್ಬವನ್ನು ಸಂಭ್ರಮಿಸಿದರು.

ಇದೇ ಮೊದಲ ಬಾರಿಗೆ ಕೊಂಗಾಡಿಯಪ್ಪ ಬಸ್‌ನಿಲ್ದಾಣದಲ್ಲಿ ಹೆಲಿಕ್ಯಾಪ್ಟರ್‌ ಮೂಲಕ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ದೇವಾನು ದೇವರೆಗಳ ಮೂರ್ತಿಗಳ ಮೇಲೆ ರಾಶಿಗಟ್ಟಲೆ ಹೂಗಳನ್ನು ಸುರಿಯಲಾಯಿತು.

ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಮುಂಭಾಗದಿಂದ ಮಧ್ಯಾಹ್ನ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಭಾರತ ಮಾತೆ, ಭಗವಾನ್ ಶ್ರೀರಾಮ, ಈಶ್ವರ, ವೀರಹನುಮಾನ್, ಶಿವಾಜಿ ಮಹಾರಾಜ್, ಇಮ್ಮಡಿ ಪುಲಿಕೇಶಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಕರ್ಷಕ ಪ್ರತಿಮೆಗಳು ಮತ್ತು ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.

ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಉದ್ಘೋಷದೊಂದಿಗೆ ಹಿಂದೂ ಕಾರ್ಯಕರ್ತರು ಭಕ್ತಿ ಭಾವ, ರಾಷ್ಟ್ರ ಭಕ್ತಿ ಮೆರೆದರು. ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀ ರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಚಿತ್ರದುರ್ಗದ ಹಿಂದೂ ಧಾರ್ಮಿಕ ಮುಖಂಡ ಪ್ರಭಂಜನ್‌ ಅವರಿಂದ ದಿಕ್ಸೂಚಿ ಭಾಷಣ ಮಾಡಿ, ಹಿಂದೂ ಉತ್ಸವಗಳಲ್ಲಿ ಡಿಜೆ ನಿಷೇಧ ಎಂದು ಹೇಳುವ ಜಿಲ್ಲಾಡಳಿತಕ್ಕೆ, ಇಡೀ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿಗೆ ಅದು ನಿಮಗೆ ಕಾಣದೇ ಇರುವುದು ದುರಂತ. ಹಿಂದೂ ಸಂಘಟನೆಗಳಿಗೆ ಕಾನೂನು ಪಾಲನೆಗೆ ಮೊದಲ ಆದ್ಯತೆ. ಆದರೆ ಕಾನೂನು ಪಾಲಕರು ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಕು. ರಾಮನ ಸಂದೇಶವೇ ಕಾನೂನು ಪಾಲನೆ ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಇದೆ ಎಂದು ಹೇಳಿದರು.

ಕ್ಷೇತ್ರೀಯ ಬಜರಂಗ ದಳ ಸಂಯೋಜಕ ಕುಮಾರಸ್ವಾಮಿ ಮಾತನಾಡಿ, ಹಿಂದುತ್ವದ ಚಿಂತನೆಗಳ ಮೂಲಕ ಸಮಾಜ ಒಗ್ಗೂಡಬೇಕು. ಹಿಂದುತ್ವದ ಧೀಶಕ್ತಿ ಎಲ್ಲರಿಗೂ ಅರ್ಥವಾಗುವಂತೆ ಮಾಡಬೇಕು. ರಾಷ್ಟ್ರೀಯ ಭಾವನೆಯನ್ನು ಪ್ರಚೋದಿಸಿ ಉತ್ತಮ ಭವಿಷ್ಯವನ್ನು ಸಾಕಾರಗೊಳಿಸುವುದು ಅತ್ಯಗತ್ಯ ಎಂದರು.

ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಮುಂದಿನ ವರ್ಷಗಳಲ್ಲಿ ಶ್ರೀರಾಮನವಮಿ ಉತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲಾಗುವುದು. ದೊಡ್ಡಬಳ್ಳಾಪುರದ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೀರಾಮ ಪ್ರಭುವಿನ ಮೇಲೆ ಹೆಲಿಕ್ಯಾಪ್ಟರ್‌ನಿಂದ ಪುಷ್ಪ ವೃಷ್ಠಿ ಮಾಡಲಾಗಿದೆ. ಕಾರ್ಯಕರ್ತರ ಉತ್ಸಾಹ ಶ್ಲಾಘನೀಯ ಎಂದರು.

ಶೋಭಾಯಾತ್ರೆ ಬಳಿಕ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಪ್ರದರ್ಶನ, ಬೃಹತ್ ರಾವಣ ಪ್ರತಿಕೃತಿ ದಹನ, ಆಕರ್ಷಕ ಸಿಡಿ ಮದ್ದು ಪ್ರದರ್ಶನ ಕಾರ್ಯಕ್ರಮ ನಡೆಯಿತು. 3 ದಿನಗಳಿಂದ ನಡೆದ ಶ್ರೀರಾಮೋತ್ಸವ ಇದೇ ವೇಳೆ ಸಮಾಪನಗೊಂಡಿತು.

ಬೃಹತ್ ಶ್ರೀರಾಮ ಶೋಭಾಯಾತ್ರೆ ತಾಲೂಕು ಕಚೇರಿ ರಸ್ತೆ, ವಿಠೋಬಾ ರಸ್ತೆ, ಸೌಂದರ್ಯಮಹಲ್ ವೃತ್ತ, ಬಸ್ನಿಲ್ದಾಣ, ಕೋಟೆ ರಸ್ತೆ, ಚೌಡೇಶ್ವರಿ ಗುಡಿ ಬೀದಿ, ಕೊಂಗಾಡಿಯಪ್ಪ ಮುಖ್ಯರಸ್ತೆ, ಮುಕ್ತಾಂಬಿಕಾ ರಸ್ತೆ, ಕುಚ್ಚಪ್ಪನಪೇಟೆ, ಅ.ನ.ಕೃ ರಸ್ತೆ, ಇಸ್ಲಾಂಪುರ, ಮುಗುವಾಳಪ್ಪ ವೃತ್ತ, ತಾಲೂಕು ಕಚೇರಿ ವೃತ್ತದ ಮೂಲಕ ಭಗತ್‌ಸಿಂಗ್‌ ಕ್ರೀಡಾಂಗಣ ತಲುಪಿತು. ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು.

(ಒಂದು ಫೋಟೊ ಪ್ಯಾನಲ್‌ನಲ್ಲಿ ಬಳಸಿ)

29ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ನಡೆದ ಬೃಹತ್ ಶ್ರೀರಾಮ ಶೋಭಾಯಾತ್ರೆಯಲ್ಲಿ ಸಹಸ್ರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

29ಕೆಡಿಬಿಪಿ7- ದೊಡ್ಡಬಳ್ಳಾಪುರದಲ್ಲಿ ಶ್ರೀರಾಮ ಶೋಭಾಯಾತ್ರೆ, ಕೇಸರಿ ಹಬ್ಬದ ಸಂಭ್ರಮ.

29ಕೆಡಿಬಿಪಿ8- ದೊಡ್ಡಬಳ್ಳಾಪುರದ ಶ್ರೀರಾಮ ಶೋಭಾ ಯಾತ್ರೆಯಲ್ಲಿ ಗಮನ ಸೆಳೆದ ಶ್ರೀರಾಮ, ಹನುಮ ಮತ್ತು ಈಶ್ವರ ದೇವರುಗಳ ಬೃಹತ್ ಪ್ರತಿಮೆಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೃಜನಶೀಲತೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ: ಮಂಜುನಾಥ
ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ: ಅಶೋಕ್