ಕುದೂರು ಮಾದರಿ ಪಟ್ಟಣವಾಗುವತ್ತ ಅಭಿವೃದ್ಧಿಯ ಓಟ

KannadaprabhaNewsNetwork |  
Published : Mar 30, 2026, 01:15 AM IST
1.ಕುದೂರು ಕೆಪಿಎಸ್ ಶಾಲೆಯ ಕಟ್ಟಡದ ನೋಟ | Kannada Prabha

ಸಾರಾಂಶ

ಕುದೂರು: ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತವಾಗಿದ್ದ ಕುದೂರು ಇದೀಗ ಸಾರಿಗೆ, ಶಿಕ್ಷಣ ಮತ್ತು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಸುಸಜ್ಜಿತವಾದ ವಸತಿ ನಿಲಯ ಉದ್ಘಾಟನೆಗೊಂಡಿದೆ

ಕುದೂರು: ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತವಾಗಿದ್ದ ಕುದೂರು ಇದೀಗ ಸಾರಿಗೆ, ಶಿಕ್ಷಣ ಮತ್ತು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಸುಸಜ್ಜಿತವಾದ ವಸತಿ ನಿಲಯ ಉದ್ಘಾಟನೆಗೊಂಡಿದೆ. ಕೆಪಿಎಸ್ ಶಾಲಾ ಕಟ್ಟಡ, ಮೈದಾನ, ಪಾರ್ಕ್ ಉದ್ಘಾಟನೆಗೆ ಅಣಿಯಾಗುತ್ತಿವೆ. ಬಸ್ ಡಿಪೋ ಮತ್ತು ಬಸ್‌ನಿಲ್ದಾಣಕ್ಕೆ ಜಾಗ ಅಚ್ಚುಕಟ್ಟುಗೊಳಿಸಿ ಶಂಕುಸ್ಥಾನಪನೆಯ ಕಲ್ಲು ನಿಲ್ಲಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೆಪಿಎಸ್ ಶಾಲೆ ಲೋಕಾರ್ಪಣೆಗೆ ಸಜ್ಜು:

ಎಲ್‌ಕೆಜಿಯಿಂದ ಪಿಯೂಸಿವರೆವಿಗೆ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಕಟ್ಟಡ ಲೋಕಾರ್ಪಣೆಗೆ ಸಿಂಗಾರ ಮಾಡಿಕೊಂಡು ಸಿದ್ಧವಾಗಿದೆ.

8ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮೂರು ಮಹಡಿಗಳಿಂದ ಕೂಡಿದ್ದು, ಪ್ರತಿ ಮಹಡಿಯಲ್ಲೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್ ಕೊಠಡಿ, ಗ್ರಂಥಾಲಯ, ಸಭಾಂಗಣ, ಪ್ರತಿ ಕೋಣೆಗೂ ಸಿಸಿ ಕ್ಯಾಮೆರಾ, ಧ್ವನಿವರ್ಧಕ ಅಳವಡಿಸಲಾಗಿದೆ. ಪ್ರತಿಕೋಣೆಗೂ ಪ್ರೊಜೆಕ್ಟರ್ ವ್ಯವಸ್ಥೆ, ಸುಸಜ್ಜಿತ ಡೆಸ್ಕ್ ಮತ್ತು ವಿಶೇಷ ವಿನ್ಯಾಸದ ಮೂಲಕ ಕಟ್ಟಡ ನಿರ್ಮಾಣವಾಗಿದೆ.

ಪ್ರಥಮದರ್ಜೆ ಕಾಲೇಜಿನ ಮೈದಾನ:

ಕೆಪಿಎಸ್ ಶಾಲೆಗೆ ಹೊಂದಿಕೊಂಡಂತಿರುವ ಸರ್ಕಾರಿ ಪದವಿ ಕಾಲೇಜಿನ ಮುಂಭಾಗದ ಮೈದಾನ ಮಳೆ ಬಂದರೆ ಕೆಸರುಗದ್ದೆಯಂತಾಗುತ್ತಿತ್ತು. ಈಗ ಅದನ್ನು ಸಮತಟ್ಟು ಮಾಡಿ ಮಳೆ ಸರಾಗ ಹರಿದು ಹೋಗುವಂತೆ ಮಾಡುವ ಕಾಮಗಾರಿ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯಲ್ಲಿ ಆರಂಭವಾಗಿದೆ.

ಹೈಟೆಕ್ ಮೈದಾನ ನಿರ್ಮಾಣ:

ಗ್ರಾಮದ ಹೃದಯ ಭಾಗದಲ್ಲಿ ಶ್ರೀರಾಮಲೀಲಾ ಮೈದಾನವಿದೆ. ಅಲ್ಲಿ ಸುಸಜ್ಜಿತ ದೀಪಾಲಂಕಾರ ಮತ್ತು ಮೇಕಪ್ ಕೊಠಡಿಗಳನ್ನೊಳಗೊಂಡ ರಂಗಮಂದಿರ, ಮೈದಾನದ ಸುತ್ತಲೂ ಸಾವಿರ ಜನರು ಕೂರುವಂತಹ ಪ್ರೇಕ್ಷಕರ ಗ್ಯಾಲರಿ, ಒಳಾಂಗಣ ಕ್ರೀಡಾಂಗಣ, ಹೊನಲು ಬೆಳಕಿನ ವ್ಯವಸ್ಥೆ, ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ವಾಕಿಂಗ್ ಪಾಥ್ ಹೀಗೆ ಹಲವು ವ್ಯವಸ್ಥೆಗಳನ್ನು ಒಳಗೊಂಡಂತೆ ಹದಿನೈದು ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಮೈದಾನ ನಿರ್ಮಾಣವಾಗುತ್ತಿದೆ.

ಕೆರೆ ಉದ್ಯಾನವನವಾಗಿ ಪರಿವರ್ತನೆ:

ಕುದೂರು ಗ್ರಾಮದ ಶಿವಗಂಗೆ ರಸ್ತೆಯಲ್ಲಿ ಕೃಷ್ಣರಾಜೇಂದ್ರ ಕೆರೆ ನಿಮಾಣವಾಗಿತ್ತು. ಆದರೆ ಅದಕ್ಕೆ ನೀರಿನ ಹರಿವು ಇಲ್ಲದಂತಾಗಿ ಒತ್ತುವರಿ ಆರಂಭವಾಗಿತ್ತು. ಎಚ್ಚೆತ್ತ ತಾಲೂಕು ಆಡಳಿತ ಉದ್ಯಾನವನದ ಬಹುದಿನದ ಬೇಡಿಕೆಗೆ ಯೋಜನೆ ಸಿದ್ಧಪಡಿಸಿ, ಕೆರೆ ಮಧ್ಯ ಕಾರಂಜಿ ನಿರ್ಮಾಣ ಮಾಡಿ ವಿವಿಧ ಹೂ ಗಿಡ, ಮರಗಳಿಂದ ಅಭಿವೃದ್ಧಿ ಪಡಿಸಿ 8 ಕೋಟಿ ರು. ವೆಚ್ಚದಲ್ಲಿ ಉದ್ಯಾನವನ ನಿರ್ಮಿಸುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್ ಡಿಪೋ, ನಿಲ್ದಾಣ:

ಗ್ರಾಮದ ಮರೂರು ರಸ್ತೆಯಲ್ಲಿ ಭೈರವನದುರ್ಗದ ಬಯಲಿನಲ್ಲಿ ಕೆರೆಯಿತ್ತು. ಅದು ದಾಖಲೆಯಲ್ಲಿ ನಮೂದಾಗದ ಕಾರಣ ಅದನ್ನು ಒಡೆದು ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮಾಡಲು ಸಿದ್ಧಪಡಿಸಲಾಗಿದೆ. ಇಲ್ಲಿ ಬಸ್ ಡಿಪೋ ಮತ್ತು ಸರ್ಕಾರಿ ಬಸ್‌ನಿಲ್ದಾಣ ನಿರ್ಮಾಣ ಮಾಡಲು ಏಪ್ರಿಲ್ ತಿಂಗಳಲ್ಲಿ ಶಂಕುಸ್ಥಾನಪನೆ ಮಾಡಲಾಗುತ್ತಿದೆ.

-------------------------------

...ಕೋಟ್....

ಅಧಿಕಾರ ಶಾಶ್ವತ ಅಲ್ಲ. ನಾವು ಮಾಡಿದ ಕೆಲಸಗಳಷ್ಟೇ ಶಾಶ್ವತ. ಅದಕ್ಕಾಗಿ ಮಾಗಡಿ ತಾಲೂಕು ಮಾದರಿಯಾಗಿಸಲು ಹಲವು ಹತ್ತು ರೀತಿ ಅಭಿವೃದ್ಧಿಗೆ ಮುಂದಾಗಿದ್ದೇನೆ. ಕುದೂರು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣ ಎನಿಸುವಂತೆ ಯೋಜನೆ ರೂಪಿಸಿ ಸರ್ವಾಂಗೀಣ ಬೆಳವಣಿಗೆಗೆ ಮುನ್ನುಡಿ ಬರೆಯುತ್ತಿದ್ದೇನೆ. ಹೇಮಾವತಿ ನದಿ ನೀರು ಮತ್ತು ಎತ್ತಿನಹೊಳೆ ಯೋಜನೆಯಲ್ಲಿ ಕುದೂರು ತಿಪ್ಪಸಂದ್ರ ಹೋಬಳಿ ಕೆರೆಗಳಿಗೆ ನೀರು ಬರಲು ಕಾಮಗಾರಿ ನಡೆಯುತ್ತಿದೆ.

- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ

----------------------------

...ಕೋಟ್....

ಕೃಷಿ ಕ್ಷೇತ್ರದಲ್ಲೂ ಮಾಗಡಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಾಸಕರ ದೂರದೃಷ್ಟಿತನದಿಂದಾಗಿ ಹಲವು ಅಭಿವೃದ್ಧಿ ಕಾಮಗಾರಿಗಳು ಬಿಡುವಿಲ್ಲದಂತೆ ನಡೆಯುತ್ತಿದೆ. ಕುದೂರು ಪಟ್ಟಣ ಮಾದರಿ ಪಟ್ಟಣವಾಗಿ ರೂಪುಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ರೈತಾಪಿ ಜನರ ಬದುಕುಗಳು ಹಸನಾಗುವುದನ್ನು ಕಾಣುವ ದಿನಗಳು ದೂರವಿಲ್ಲ .

- ಶಿವಪ್ರಸಾದ್, ಅಧ್ಯಕ್ಷರು, ಟಎಪಿಎಸಿಎಂಎಸ್

------------------------------

29ಕೆಆರ್ ಎಂಎನ್ 1,2.ಜೆಪಿಜಿ

1.ಕುದೂರು ಕೆಪಿಎಸ್ ಶಾಲೆಯ ಕಟ್ಟಡದ ನೋಟ.

2.ಎಚ್.ಸಿ.ಬಾಲಕೃಷ್ಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಇರುವವರೆಗೂ ರಂಗಭೂಮಿ ಜೀವಂತ
ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ!