
ರಾಮನಗರ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾಗಿದ್ದ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳೇ ಹಣದಾಸೆಗೆ ಅವಧಿ ಮೀರಿದ ಮದ್ಯ ಮಾರಾಟ ಮಾಡುತ್ತಿರುವ ಆತಂಕಕಾರಿ ಘಟನೆಯೊಂದು ಬಯಲಿಗೆ ಬಂದಿದೆ. ಇದು ಗ್ರಾಮೀಣ ಭಾಗಗಳಲ್ಲಿರುವ ಪಾನ ಪ್ರಿಯರು ತಾವು ಸೇವಿಸುವ ಮದ್ಯದ ಬಗ್ಗೆ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.
ನಿಗಮದ ಸೂಪರ್ ವೈಸರ್ ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್‌ಗಳಲ್ಲಿ ಅವಧಿ ಮೀರಿದ ಮದ್ಯ ಪತ್ತೆಯಾದ ಬಳಿಕ ಇಂತಹದೊಂದು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ.
ಐಜೂರು ಪೊಲೀಸರು ಸೂಪರ್ ವೈಸರ್ ಸುರೇಶ್(52) ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಸ್ಟೇಷನ್ ಬೇಲ್ ಮೇಲೆ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಆದರೆ, ಈ ಘಟನೆ ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿ ಮೀರಿದ ಮದ್ಯವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದುದ್ದಾಗಿ ಪೊಲೀಸರ ವಿಚಾರಣೆ ವೇಳೆ ಸೂಪರ್ ವೖಸರ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು.
ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್‌ಗಳಲ್ಲಿ 20 ಬಾಕ್ಸ್ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎನ್ನಲಾಗಿದೆ.
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ:
ಗ್ರಾಮಗಳ ಸಣ್ಣ ಪುಟ್ಟ ಚಿಲ್ಲರೆ ಅಂಗಡಿ, ಮನೆಗಳಲ್ಲಿ ಅಷ್ಟೇ ಯಾಕೆ ರಾಷ್ಟೀಯ ಹೆದ್ದಾರಿಯ ಪಕ್ಕದ ಅಂಗಡಿಗಳಲ್ಲಿ ಯಾರ ಭಯವಿಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ದಂಧೆ ನಡೆಯುತ್ತಿದ್ದು, ಇಂತಹ ಸಣ್ಣಪುಟ್ಟ ಅಂಗಡಿಗಳಿಗೆ ಕೆಲ ಬಾರ್ ಸಿಬ್ಬಂದಿಗಳು ಇದ್ದಲ್ಲಿಗೆ ಮದ್ಯ ಸರಬರಾಜು ಕೂಡ ಮಾಡುತ್ತಿದ್ದಾರೆ. ಆದರೀಗ ಅವಧಿ ಮೀರಿದ ಮದ್ಯ ಪೂರೖಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದ ಮೇಲೆ ಮದ್ಯ ಪ್ರಿಯರು ಆತಂಕ ಪಡುವಂತಾಗಿದೆ.
ಸೂಪರ್‌ವೈಸರ್ ಬಂಧನ: ಮುಂದುವರಿದ ಕಾರ್ಯಾಚರಣೆ
ಸಾಮಾನ್ಯವಾಗಿ ಮದ್ಯ ಹಾಗೂ ಬಿಯರ್ ಡೇಟ್ ಎಕ್ಸ್ಪೈರಿ ಆದ ನಂತರ ಅವುಗಳನ್ನು ನಾಶಮಾಡುವ ನಿಯಮವಿದೆ. ಆದರೆ ಕಳ್ಳ ಅಧಿಕಾರಿಗಳು ಮದ್ಯದ ಬಾಟಲಿ ಮೇಲಿನ ಎಕ್ಸ್ಪೇರಿ ಡೇಟ್ ಅನ್ನು ತಿದ್ದಿ ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದು, ಇನ್ನು ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ರಾಮನಗರದ ಐಜೂರು ಪೊಲೀಸರ ಕಾರ್ಯಾಚರಣೆ ವೇಳೆ ಸೂಪರ್ ವೖಸರ್ ಸುರೇಶ್ ಮನೆಯಲ್ಲಿ ಪತ್ತೆಯಾದ ಅವಧಿ ಮೀರಿದ ಮದ್ಯ.