ಧಾರವಾಡ: ನಾಡೋಜ ಡಾ. ಏಣಗಿ ಬಾಳಪ್ಪ 1947ರಲ್ಲಿ ತಮ್ಮದೇ ಆದ ಕಲಾ ವೈಭವ ನಾಟ್ಯ ಸಂಘ ಕಟ್ಟಿ ದಶಕಗಳ ಕಾಲ ಯಶಸ್ವಿ ನಾಟಕಗಳನ್ನು ಪ್ರದರ್ಶಿಸಿದ ರಂಗಭೂಮಿಯ ಸಾಕ್ಷಿ ಪ್ರಜ್ಞೆಯಾಗಿದ್ದರು ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.
1874ರಲ್ಲಿ ವೀರನಾರಾಯಣ ಪ್ರಸಾದಿಕ ಕೃತಪುರ ಕರ್ನಾಟಕ ನಾಟಕ ಮಂಡಳಿ ಹಾಗೂ ಶಿರಹಟ್ಟಿಯ ಮಹಾಲಕ್ಷ್ಮೀ ಪ್ರಸಾದಿಕ ಸಂಗೀತ ನಾಟಕ ಮಂಡಳಿಗಳು ಮರಾಠಿಮಯವಾದ ಆ ಕಾಲ ಘಟ್ಟದಲ್ಲಿ ಕರ್ನಾಟಕದಲ್ಲಿ ಕನ್ನಡ ನಾಟಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವು. ಆಧುನಿಕ ನಾಟಕಗಳ ಪಿತಾಮಹರೆನಿಸಿಕೊಂಡ ಸಕ್ಕರಿ ಬಾಳಾಚಾರ್ಯ ಹಾಗೂ ಡಾ. ಏಣಗಿ ಬಾಳಪ್ಪನವರ ರಂಗ ಸೇವೆ ಸ್ಮರಣೀಯ ಎಂದರು.
1961ರಲ್ಲಿ ವಿಶ್ವ ರಂಗಭೂಮಿ ಸಂಸ್ಥೆಯು ಮಾರ್ಚ್ 27 ಅನ್ನು ಪ್ರತಿ ವರ್ಷ ವಿಶ್ವರಂಗಭೂಮಿ ದಿನವನ್ನಾಗಿ ಆಚರಿಸಲು ಕರೆ ನೀಡಿತು. ತನ್ನಿಮಿತ್ತ ರಂಗ ಚಿಂತನೆ, ನಾಟಕ ಪ್ರದರ್ಶನ, ವಿಚಾರ ಸಂಕಿರಣ, ರಂಗ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ. ರಂಗ ಚಟುವಟಿಕೆ ನಿರಂತರವಾಗಿ ನಡೆಯಬೇಕೆಂಬ ಸ್ಮರಣೀಯ ದಿನವಾಗಬೇಕು ಎನ್ನುವ ಗುರಿಯೊಂದಿಗೆ ವಿಭಿನ್ನ ಸಂಸ್ಕೃತಿಗಳನ್ನು ಬೆಸೆಯುವ ಕಾರ್ಯ ವಿಶ್ವರಂಗಭೂಮಿ ದಿನದ ಉದ್ದೇಶ ಎಂದು ಹೇಳಿದರು.ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ಅಭಿನಂದನಾ ಪರ ನುಡಿಗಳನ್ನಾಡಿ, ಸಕ್ಕರಿ ಬಾಳಾಚಾರ್ಯರಂತೆ ತನ್ನ ನೆಲೆ ಕಳೆದುಕೊಂಡಿತು ಎಂದು ಹೇಳಿದರು.
ಈ ಎರಡೂ ನಾಟಕ ಕಂಪನಿಗಳ ಪರವಾಗಿ ಬಾಬರಾವ್ ಎಸ್. ಹಾಗೂ ಮಾಲತಿ ಪುರಂದರೆ ಅವರನ್ನು ಸನ್ಮಾನಿಸಲಾಯಿತು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಏಣಗಿ ಬಾಳಪ್ಪ ಟ್ರಸ್ಟ್ ಪರವಾಗಿ ಗಣ್ಯರನ್ನು ಸನ್ಮಾನಿಸಲಾಯಿತು. ಶಂಕರ ಕುಂಬಿ, ಬಸವರಾಜ ಬೆಂಗೇರಿ, ಪ್ರೊ. ಧನವಂತ ಹಾಜವಗೋಳ, ವೀರಣ್ಣ ಒಡ್ಡೀನ, ಸುಭಾಸ ಏಣಗಿ, ಮೋಹನ ಏಣಗಿ, ಅರವಿಂದ ಏಣಗಿ, ವಿಜಯ ಏಣಗಿ, ಅಶೋಕ ಏಣಗಿ, ಹನಮೇಶ ಸಕ್ರಿ ದಂಪತಿಗಳಿದ್ದರು.