ಕನ್ನಡಪ್ರಭ ವಾರ್ತೆ ದಾವಣಗೆರೆ
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಜನತೆ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಐತಿಹಾಸಿಕ ಗೆಲುವನ್ನು ತಂದು ಕೊಡಲಿದ್ದಾರೆ ಎಂದರು.
ಉಭಯ ಕ್ಷೇತ್ರಗಳ ಫಲಿತಾಂಶ ಇಡೀ ರಾಜ್ಯದ ಜನತೆಗೆ ನೂತನ ಸಂದೇಶ ನೀಡಲಿದೆ. ಕಾಂಗ್ರೆಸ್ ಈವರೆಗೆ ಅಲ್ಪಸಂಖ್ಯಾತರನ್ನು ಕೇವಲ ಮತದಾರರನ್ನಾಗಿ ಬಳಕೆ ಮಾಡಿಕೊಳ್ಳುತ್ತಿತ್ತು. ಈಗ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಏನೆಂಬ ಸತ್ಯದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರೂ ಸೇರಿ ಎಲ್ಲ ವರ್ಗಗಳ ಜನರು ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ, ಬಲ ಮತ್ತಷ್ಟು ಹೆಚ್ಚಾಗಿದೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿ ಬಂದಿದೆ. ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದಾರೆ. ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾಡಿದ ಭಾಷಣ, ಹೇಳಿಕೆಗಳನ್ನು ಗಮನಿಸಿದರೆ, ಹೈಕಮಾಂಡ್ ಹೇಳಿದಂತೆ ಕೇಳುವ ಪರಿಸ್ಥಿತಿಗೆ ಅವರು ಬಂದಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದರು.
ಕೊಂಕು ಮಾತಿಗೆ ಕೊರಗುವುದೇಕೆ?:
ಪಕ್ಷದ ರಾಜ್ಯಾಧ್ಯಕ್ಷನಾಗಿ ನನಗೆ ಸಾಕಷ್ಟು ಕೆಲಸಗಳು ಇವೆ. ಯಾರದೋ ಕೊಂಕು ಮಾತಿಗೆ ಕೊರಗುವುದೇಕೆ ಎಂಬ ಮಾತನ್ನು ನಂಬಿದವನು ನಾನು. ಯಾರ ಮಾತಿಗೂ ಉತ್ತರ ಕೊಡುವ ಅವಶ್ಯಕತೆ ನನಗೆ ಇಲ್ಲ. ಯಾವುದೇ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ನೀಡುವುದೂ ಇಲ್ಲ. ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು. ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೊಂದಾಣಿಕೆಯಿಂದ ದಾವಣಗೆರೆಗೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ ಎಂಬ ಯತ್ನಾಳ ಆರೋಪಕ್ಕೆ ಪರೋಕ್ಷ ಪ್ರತಿಕ್ರಿಯೆ ನೀಡಿದರು.ದಾವಣಗೆರೆಯಲ್ಲಿ ಪ್ರಚಾರಕ್ಕೆ ಜಮೀರ್‌ಗೆ ಸ್ವಾಭಿಮಾನ ಅಡ್ಡಿ?:ದಾವಣಗೆರೆಗೆ ಬಾರದಂತೆ ಗಣಿ ಸಚಿವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರೇ ಹೇಳಿರುವ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲಿದ್ದು, ಪಕ್ಷದ ಸೂಚನೆಯಂತೆ ನಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.ಕೇರಳ ಚುನಾವಣಾ ಪ್ರಚಾರದಲ್ಲಿರುವ ಜಮೀರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ ಅವರೇ ನಾನು ಬರಬಾರದು ಎಂದಿರುವ ಹಿನ್ನೆಲೆಯಲ್ಲಿ ನನಗೆ ಸ್ವಾಭಿಮಾನ ಅಡ್ಡ ಬರುತ್ತಿದೆ ಏನು ಮಾಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.ಪ್ರಸ್ತುತ ಜಮೀರ್ ಅಹಮದ್ ಕೇರಳದಲ್ಲಿದ್ದು ಏ.4ರವರೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇರಲಿದ್ದಾರೆ. ಬಳಿಕ ದಾವಣಗೆರೆಯಲ್ಲಿ ಪ್ರಚಾರ ಮಾಡುವ ಕುರಿತು ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲಿದ್ದು, ಪಕ್ಷ ಸೂಚಿಸಿದಂತೆ ನಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಆಯ್ಕೆ ಕುರಿತ ಬೆಳವಣಿಗೆಗಳ ವೇಳೆ ಮಲ್ಲಿಕಾರ್ಜುನ ಅವರು, ‘ನಮ್ಮ ಕ್ಷೇತ್ರದ ಚುನಾವಣೆ ಕುರಿತು ನಮ್ಮ ಹತ್ತಿರ ಬಂದು ಮಾತನಾಡಲು ಅವನು ಯಾರು, ಅವನಿಗೂ ಈ ಕ್ಷೇತ್ರಕ್ಕೂ ಏನು ಸಂಬಂಧ, ಅವನು ಯಾಕೆ ಇಲ್ಲಿಗೆ ಬರಬೇಕು’ ಎಂದು ಪ್ರಶ್ನಿಸಿದ್ದರು. ಆ ಹೇಳಿಕೆ ಈಗ ಚರ್ಚೆ ಹುಟ್ಟುಹಾಕಿದೆ.ಉಪಚುನಾವಣೇಲಿ 50000 ಮುನ್ನಡೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ:
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾರೇ ಗೆದ್ದರೂ, ಸೋತರೂ ರಾಜ್ಯ ಸರ್ಕಾರವೇನೂ ಬಿದ್ದು ಹೋಗುವುದಿಲ್ಲ. ಕೇಂದ್ರ ಸರ್ಕಾರಕ್ಕೂ ಏನೂ ಆಗುವುದಿಲ್ಲ. ಉಪ ಚುನಾವಣೆ ಫಲಿತಾಂಶ ಎರಡೂ ಸರ್ಕಾರಗಳ ಸಾಧನೆ ಮೇಲೆ ನೀಡುವ ಸಂದೇಶ ಎಂದು ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನು ವೇಗವಾಗಿ ಈಡೇರಿಸುವ ಕೆಲಸ ಮಾಡಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬರುವಾಗ ವಿದೇಶದಲ್ಲಿರುವ ಕಪ್ಪುಹಣ ತರುತ್ತೇವೆಂದು ನರೇಂದ್ರ ಮೋದಿ ಹೇಳಿದ್ದರು. ಬೆಲೆ ಇಳಿಸುತ್ತೇವೆ ಎಂದಿದ್ದರು. ಆದರೆ, ಅದು ಯಾವುದನ್ನೂ ಮಾಡಲಿಲ್ಲ. ವಚನ ಭ್ರಷ್ಟರು ಯಾರಾದರೂ ಇದ್ದರೆ ಅದು ಬಿಜೆಪಿಯವರು. ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ. ಮತ್ತೊಂದು ಕಡೆ ಹಣದ ಲೆಕ್ಕ ಇಲ್ಲ ಎಂದರು.ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆ ಅಭ್ಯರ್ಥಿಗಳಿಗೆ ಸೀಮಿತವಲ್ಲ, ಕಾಂಗ್ರೆಸ್ ಹಾಗೂ ಆರೆಸ್ಸೆಸ್- ಬಿಜೆಪಿಯ ಸಿದ್ಧಾಂತಗಳ ವಿರುದ್ಧದ ಸಂಘರ್ಷವಾಗಿದೆ. ರಾಜ್ಯದ ಶೇ.56ರಷ್ಟಿರುವ ಪರಿಶಿಷ್ಟರ ಬಗ್ಗೆ ಅಭಿಮಾನವಿದ್ದಿದ್ದರೆ ಮೋದಿ ಸರ್ಕಾರ, ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬಹುದಿತ್ತು. ಈ ಜನರಿಗೆ ಸಾಮಾಜಿಕ ಕೊಡಲಿ ಪೆಟ್ಟು ನೀಡಿರುವ ಬಿಜೆಪಿ ಎಸ್ಸಿ-ಎಸ್ಟಿ, ಅಹಿಂದ ಮತಗಳನ್ನು ಹೇಗೆ ಕೇಳುತ್ತದೆ? ಎಂದು ಉಗ್ರಪ್ಪ ಪ್ರಶ್ನಿಸಿದರು.