ಕನ್ನಡಪ್ರಭ ವಾರ್ತೆ ತುಮಕೂರು ಕಲೆಯಿಂದ ಮನುಷ್ಯನು ಸದಾ ಉತ್ಸಾಹ ಶಾಲಿಯಾಗಿರುತ್ತಾನೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ ತಿಳಿಸಿದರು.
ನಮ್ಮ ಭಾರತ ದೇಶ ಲಲಿತ ಕಲೆ, ಸಂಸ್ಕೃತಿ ಹಾಗೂ ಸಮಗ್ರತೆಯಿಂದ ಕೂಡಿರುವ ದೇಶವಾಗಿದ್ದು . ಮನುಷ್ಯನು ಹುಟ್ಟಿನಿಂದಲೇ ಕಲೆ ಮತ್ತು ಸಂಸ್ಕೃತಿಯನ್ನು ಬಳುವಳಿಯಾಗಿ ಪಡೆದುಕೊಂಡಿರುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣದ ಜನರು ಉದ್ಯೋಗಕ್ಕೆ ಮೊರೆ ಹೋಗಿ ಕಲೆ ಮತ್ತು ಸಂಸ್ಕೃತಿಯನ್ನು ಹಂತ ಹಂತವಾಗಿ ಮರೆತು ಹೋಗುತ್ತಿದ್ದಾರೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ವಿದ್ಯಾರ್ಥಿಗಳಿಂದ ಈ ಕಲೆ ಮತ್ತು ಸಂಸ್ಕೃತಿಯನ್ನು ಕಾಣಬಹುದಾಗಿದೆ ಹಾಗಾಗಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಲೆ ಸಂಸ್ಕೃತಿಗೆ ರಾಯಭಾರಿಗಳಾಗಿರಬೇಕೆಂದು ಹೇಳಿದರು. ಸರಿಗಮಪ ಸಿಸನ್ 20 ರ ಕಾರ್ಯಕ್ರಮದ ಸ್ಫರ್ಧಿ ಹಾಗೂ ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ. ಶ್ರಾವ್ಯ ಮಾತನಾಡಿ ಪ್ರತಿಭೆ ಎನ್ನುವುದು ಮಾನವನಿಗೆ ದೇವರು ಕೊಟ್ಟಿರುವ ವರವಾಗಿದೆ. ಮಾನವನಲ್ಲಿ ವಿಭಿನ್ನ ರೀತಿಯ ಪ್ರತಿಭೆಗಳು ಅಡಗಿರುತ್ತವೆ, ಅವಕಾಶಗಳು ಸಿಕ್ಕಾಗ ಅಂತರಂಗದಲ್ಲಿರುವ ಪ್ರತಿಭೆಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಹೊರ ಜಗತ್ತಿಗೆ ಪರಿಚಯಿಸುವುದರಿಂದ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ಮಾರ್ಗವಾಗಿದೆ ಎಂದು ಹೇಳಿದರು. ಎಸ್ ಎಸ್ ಐಟಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ವೀರಯ್ಯ ಮಾತನಾಡಿ ಧನಾತ್ಮಕ ವರ್ತನೆ, ಏಕಾಗ್ರತೆ, ಒಳ್ಳೆಯ ನಡತೆ, ಹಾರ್ಡ್ವರ್ಕ್ ಇವೆಲ್ಲವೂ ನಮ್ಮ ಜೊತೆ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಡಾ. ಮಹಾಂತೇಶ್ ಎಂ ನಡಕಟ್ಟಿ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧೆಗಳನ್ನು ನಾವಿನ್ಯತೆ, ಸೃಜನಾತ್ಮಕತೆ, ಕ್ರಿಯಾತ್ಮಕತೆಯಿಂದ ಆಯೋಜಿಸಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನು ಆನಂದಿಸಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಾಹೇ ವಿವಿಯಿಂದ ನೂತನವಾಗಿ ಪಿಎಚ್‌ಡಿ ಪಡೆದ ಪ್ರಾಧ್ಯಾಪಕರಿಗೆ ಗೌರವಿಸಲಾಯಿತು. ಕಲೋತ್ಸವ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಸ್ಫರ್ಧೆಗಳಿದ್ದು ವಿದ್ಯಾರ್ಥಿಗಳು ಈ ಸ್ಫರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಅಕಾಡೆಮಿಯ ಡೀನ್ ಡಾ. ರೇಣುಕಾ ಲತಾ ಎಸ್, ಕಲೋತ್ಸವ 2026ರ ಅಧ್ಯಕ್ಷ ಡಾ.ಎನ್.ಪ್ರದೀಪ್, ಪ್ರಾಧ್ಯಾಪಕರುಗಳಾದ ಡಾ.ದಿವ್ಯಪ್ರಭಾ, ಡಾ. ರಾಜೇಶ್ ಕಾಮತ್ ಡಾ.ಯೋಗಾನಂದ್, ಹಾಗೂ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.