ಸಿ.ಸಿದ್ದರಾಜು ಮಾದಹಳ್ಳಿ
ಪಟ್ಟಣದಲ್ಲಿ ಡಿ.15 ರಿಂದ ನಡೆಯಲಿರುವ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವಕ್ಕೆ ಕೈಗೊಂಡಿರುವ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪುರಸಭೆಯ 33 ಎಕರೆ ಜಾಗದಲ್ಲಿ ಡಿ.15 ರಿಂದ 21ರವರೆಗೆ 7 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಗಣ್ಯರು, ಲಕ್ಷಾಂತರ ಜನರು, ಭಕ್ತರು ಕೂಡಲೇ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.ಜನರಿಗೆ ಪ್ರಸಾದ ವಿತರಿಸಲು, ವಸ್ತು ಪ್ರದರ್ಶನಕ್ಕೆ ಮಳಿಗೆಗಳು, ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್, ಪ್ರವೇಶ ದ್ವಾರ, ನಿರ್ಗಮನ ದ್ವಾರ ಸೇರಿದಂತೆ ಬರುವ ಎಲ್ಲಾ ಭಕ್ತರು, ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು, ಸೂಕ್ತ ಬಂದೋಬಸ್ತ್ ಗೆ ಕ್ರಮ ವಹಿಸಲಾಗುತ್ತಿದೆ.
ಮೈಸೂರಿನ ಸುತ್ತೂರಿಗೆ ಸೀಮಿತವಾಗಿದ್ದ ಜಯಂತ್ಯುತ್ಸವ ನಂತರದ ದಿನಗಳಲ್ಲಿ ಭಕ್ತರ ಆಪೇಕ್ಷೆಯಂತೆ ಸಂತೆಸರಗೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಕೆ.ಆರ್.ನಗರ, ನಂಜನಗೂಡು, ಟಿ.ನರಸೀಪುರ, ಹಣಸೂರು, ಪಿರಿಯಾಪಟ್ಟಣ, ಯಳಂದೂರು, ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲೂ ನಡೆದಿತ್ತು. ಈ ಬಾರಿ ಐತಿಹಾಸಿ, ಧಾರ್ಮಿಕ ಕ್ಷೇತ್ರ, ಬೊಪ್ಪೇಗೌಡನಪುರದ ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರ ಮಳವಳ್ಳಿಯಲ್ಲಿ ಆಚರಿಸುತ್ತಿರುವುದು ವಿಶೇಷವಾಗಿದೆ.
ಡಿ.16 ರಂದು ರಾಷ್ಟ್ರಪತಿ ಆಗಮನ ವಿಶೇಷ:
7 ದಿನಗಳ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ, ಕೇಂದ್ರ ಸಚಿವ ಶೋಭ ಕಾರಂದ್ಲಾಜೆ ಸೇರಿದಂತೆ ರಾಜ್ಯದ ಸಚಿವರು, ರಾಜಕೀಯ ನಾಯಕರು, ಸಚಿವರು, ಶಾಸಕರು, ಮುಖಂಡರು, ಚಿತ್ರನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ, ಎನ್.ಎಸ್.ನಾಗಭೂಷಣ ಸೇರಿದಂತೆ ತುಮಕೂರು ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಕಾಗಿನೆಲೆ ಶಾಖಾ ಮಠ ಸೇರಿದಂತೆ ರಾಜ್ಯದ ವಿವಿಧ ಮಠಗಳ ಶ್ರೀಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.21ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಶಾಸಕರು, ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಜಯಂತ್ಯುತ್ಸವದ ವೇಳೆ 7 ದಿನಗಳ ಕಾಲ ಕಲಾವಿದರಿಂದ ಸಂಗೀತ ಗಾಯನ, ನಾಟಕ, ವಾದ್ಯಗೋಷ್ಠಿ, ಸಂಗೀತ ಸಂಜೆ, ಜನಪದ ಸಂಭ್ರಮ, ವಚನ ನೃತ್ಯರೂಪಕ, ಹಾಸ್ಯ ಕಾರಂಜಿ, ಭಕ್ತಿ ಸಂಗೀತ, ಮಂಟೇಸ್ವಾಮಿ ಕಥಾ ಪ್ರಸಂಗ, ಸಂಗೀತ ಸಂಭ್ರಮದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅತಿಥಿ ಗಣ್ಯರು ಉಪನ್ಯಾಸ ನೀಡಲಿದ್ದಾರೆ.