ನೀಟ್ ಪರೀಕ್ಷೆ ಹಗರಣ ನ್ಯಾಯಾಂಗ ತನಿಖೆ ನಡೆಸಬೇಕು

KannadaprabhaNewsNetwork | Published : Jun 12, 2024 12:35 AM

ಸಾರಾಂಶ

ನೀಟ್‌ ಪರೀಕ್ಷೆ ಹಗರಣವನ್ನು ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪಾಲಕರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಮುಖಂಡರ ಒತ್ತಾಯ । ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನೀಟ್‌ ಪರೀಕ್ಷೆ ಹಗರಣವನ್ನು ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪಾಲಕರು ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು ನೀಟ್ ಫಲಿತಾಂಶದಲ್ಲಿ ಆಗಿರುವುದು ಕೇವಲ ಹಗರಣವಲ್ಲ. ಅದು ವಿದ್ಯಾರ್ಥಿಗಳ ಮತ್ತು ಅವರ ಭವಿಷ್ಯದ ಮೇಲೆ ಆಗಿರುವ ಘೋರ ಅಪರಾಧವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರು ಮಾತನಾಡಿ, ಲೋಕಸಭೆ ಚುನಾವಣೆ ಫಲಿತಾಂಶದ ಅಬ್ಬರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಕನಸು ಕಂಡಿದ್ದ ನೀಟ್ ಫಲಿತಾಂಶ ಬಿಡುಗಡೆಯಾಗಿದೆ. ಅಂದು ಎಲ್ಲರ ಗಮನವೂ ಚುನಾವಣೆ ಫಲಿತಾಂಶದ ಮೇಲಿತ್ತು. ಆದರೆ, ಇಡೀ ದೇಶವೇ ಆತಂಕಕ್ಕೆ ಒಳಗಾಗುವಂತೆ ನೀಟ್ ಪರೀಕ್ಷೆ ಫಲಿತಾಂಶದ ಹಗರಣ ಹೊರಬಿದ್ದಿತು ಎಂದರು.

720 ಅಂಕ ಗಳಿಕೆ ಸಾಧ್ಯವೇ ಇಲ್ಲ:

ಆಶ್ಚರ್ಯದ ವಿಷಯವೆಂದರೆ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದು, ಮೊದಲ ಸ್ಥಾನದಲ್ಲಿದ್ದಾರೆ. ನೀಟ್ ಪರೀಕ್ಷೆ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ವಿದ್ಯಾರ್ಥಿಗಳು ಈ ಸಲ 720 ಅಂಕ ಪಡೆದಿದ್ದಾರೆ. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿರುವುದು ಪರೀಕ್ಷಾ ಅಕ್ರಮ ನಡೆದ ಬಗ್ಗೆ ಪುಷ್ಠಿ ನೀಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿರುವ ಕಾರಣ ಪೂರ್ಣ ಪ್ರಮಾಣದ 720 ಅಂಕ ಗಳಿಸಲು ಸಾಧ್ಯವೇ ಇಲ್ಲ. 718, 719 ಅಂಕ ಪಡೆದರೆ ಅದೇ ಹೆಚ್ಚು. ಈ ಫಲಿತಾಂಶ ಬಂದಿರುವುದು, ಹಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದರಿಂದ ಎಂದು ಎನ್‌ಟಿಎ ಸಮಜಾಯಿಸಿ ನೀಡಿದೆ. ಆದರೆ ಕೃಪಾಂಕಗಳ ಹಿಂದೆ ಎಲ್ಲಿಯೂ ಎನ್‌ಟಿಎ ಒಂದು ನಿರ್ದಿಷ್ಟ ಮಾದರಿ ನೀಡಿಲ್ಲ. ಪ್ರಶ್ನೆಪತ್ರಿಕೆ ತಡವಾಗಿ ನೀಡಿದ್ದಕ್ಕೆ ಕೃಪಾಂಕ ನೀಡಿದ್ದಾಗಿ ಅಸಂಬದ್ಧ ಕಾರಣ ನೀಡಿದ ಎನ್‌ಟಿಎ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ, ನಿಷ್ಕಾಳಜಿ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ಎಚ್ಚರಿಸಿತ್ತು:

ಬಿಹಾರ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ವಿಚಾರ ಆತಂಕಕಾರಿ ಸಂಗತಿ. ಕೇಂದ್ರ ಸರ್ಕಾರವು ಈ ಹಿಂದೆ ರಾಜ್ಯವಾರು ವೈದ್ಯಕೀಯ, ಎಂಜಿನಿಯರಿಂಗ್‌ಗೆ ನಡೆಯುತ್ತಿದ್ದ ಜಂಟಿ ಸಿಇಟಿಗಳಲ್ಲಿ ನಡೆಯುತ್ತಿದ್ದ ಬೃಹತ್ ಮಟ್ಟದ ಭ್ರಷ್ಟಾಚಾರ ತಡೆಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆ ಕಡಿಮೆ ಮಾಡುವ ಕಾರಣವೊಡ್ಡಿ, ಇಡೀ ದೇಶಕ್ಕೆ ಒಂದು ಪರೀಕ್ಷೆಯೆಂದು ನೀಟ್ ಜಾರಿಗೊಳಿಸಿತ್ತು. ಆದರೆ ಇಂದು ಏನಾಗಿದೆ ಎಂಬ ಬಗ್ಗೆ ಕೇಂದ್ರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗಲೇ ಎಐಡಿಎಸ್‌ಒ ಆ ನಿರ್ಧಾರವನ್ನು ವಿರೋಧಿಸಿತ್ತು. ನೀಟ್ ಪರೀಕ್ಷೆ ಉದ್ದೇಶದ ಕುರಿತು ಅನೇಕ ಆತಂಕಗಳನ್ನು ವ್ಯಕ್ತಪಡಿಸಿತ್ತು. ಎಐಡಿಎಸ್‌ಒ ಆತಂಕದಂತೆ ಇಂದು ನೀಟ್‌ ಹಗರಣ ಸಾಬೀತಾಗಿದೆ ಎಂದು ಹೇಳಿದರು.

ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ತಕ್ಷಣವೇ ನೀಟ್‌ ಪರೀಕ್ಷೆ ಹಗರಣದ ಉನ್ನತಮಟ್ಟದ ನ್ಯಾಯಾಂಗ ತನಿಖೆ ಆಗಬೇಕು. ನೀಟ್ ಪರೀಕ್ಷಾ ಫಲಿತಾಂಶದ ಅಕ್ರಮ, ಹಗರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಹಾಗೂ ಅನ್ಯಾಯಕ್ಕೊಳಗಾದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್‌, ಉಪಾಧ್ಯಕ್ಷರಾದ ಬಿ.ಕಾವ್ಯ, ಯೋಗೇಶ, ನಂದೀಶ, ಗೌತಮ್‌, ಆಕಾಶ ಸೇರಿದಂತೆ ವಿದ್ಯಾರ್ಥಿಗಳು, ಯುವಜನರು, ಪಾಲಕರು ಪ್ರತಿಭಟನೆಯಲ್ಲಿದ್ದರು.

- - -

ಬಾಕ್ಸ್‌ * ವಿದ್ಯಾರ್ಥಿ ಆತ್ಮಹತ್ಯೆ ದುಃಖಕರ ಸಂಗತಿ ನೀಟ್ ಫಲಿತಾಂಶದ ದಿನವೇ ಪ್ರವೇಶ ಪರೀಕ್ಷೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳ ಗುಡಾಣವಾದ ರಾಜಸ್ಥಾನದ ಕೋಟಾದಲ್ಲಿ ಓರ್ವ ವಿದ್ಯಾರ್ಥಿ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ದುಃಖಕರ ಸಂಗತಿ. ಈಗಾಗಲೇ ರೈತ, ಕಾರ್ಮಿಕರು, ದುಡಿಯುವ ವರ್ಗದ ಮಕ್ಕಳಿಗೆ ಕೈಗೆಟುಕದ ವೈದ್ಯಕೀಯ ಶಿಕ್ಷಣ ಮತ್ತು ಪ್ರವೇಶ ಪರೀಕ್ಷೆಗಳು ಈಗ ಭ್ರಷ್ಟಾಚಾರದ ಹೆದ್ದಾರಿಯಾಗಿವೆ. ಆಳುವ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬಡವರನ್ನು ಶಿಕ್ಷಣದಿಂದ ವಂಚಿತರಾಗಿ ಮಾಡುವ ಹುನ್ನಾರದ ಇಂತಹ ಪ್ರವೇಶ ಪರೀಕ್ಷೆಗಳ ದಂಧೆ ಹಾಗೂ ಈ ಬಾರಿ ನೀಟ್‌ನ ಅಕ್ರಮ ಮಟ್ಟ ಹಾಕಲು ದೇಶವ್ಯಾಪಿ ಹೋರಾಟಕ್ಕೆ ವಿದ್ಯಾರ್ಥಿ, ಯುವಜನರು, ಪಾಲಕರು ಸಜ್ಜಾಗಬೇಕು ಎಂದು ಮಹಾಂತೇಶ ಬೀಳೂರು ತಿಳಿಸಿದರು.

- - - -11ಕೆಡಿವಿಜಿ1, 2, 3, 4:

ನೀಟ್‌-2024 ಪರೀಕ್ಷಾ ಫಲಿತಾಂಶದ ಹಗರಣದ ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಮಂಗಳವಾರ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Share this article