ನೈಋತ್ಯ ರೈಲ್ವೆ ವಿಭಾಗಗಳಲ್ಲಿ ಮಳೆಗಾಲಕ್ಕೆ ಹಳಿಗಳಲ್ಲಿ ವಿಶೇಷ ಗಸ್ತು

KannadaprabhaNewsNetwork |  
Published : Jun 12, 2024, 12:35 AM IST
ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ರೈಲು ಹಳಿ ಪರಿಶೀಲನೆ | Kannada Prabha

ಸಾರಾಂಶ

ಮುಂಗಾರು ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ರೈಲು ಹಳಿಗಳ ಸಮಗ್ರ ಸುರಕ್ಷತಾ ತಪಾಸಣೆ ನಡೆಸಿದ್ದು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಳೆಗಾಲ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ರೈಲು ಹಳಿಗಳ ಸುತ್ತಮುತ್ತ ನೀರಿನ ಮಟ್ಟ, ಒಳಚರಂಡಿ ಹರಿವು, ಹಳಿಯಲ್ಲಿ ಮರಗಳು ಬೀಳುವುದು ಅಥವಾ ಸಂಚಾರಕ್ಕೆ ಅಡ್ಡಿಯಾಗುವ ಯಾವುದೇ ಸಂಗತಿಗಳನ್ನು ವೀಕ್ಷಿಸಲು ವಿಶೇಷ ಗಸ್ತು ಆಯೋಜಿಸಿದೆ.

ಮುಂಗಾರು ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ರೈಲು ಹಳಿಗಳ ಸಮಗ್ರ ಸುರಕ್ಷತಾ ತಪಾಸಣೆ ನಡೆಸಿದ್ದು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.

ಮೈಸೂರು ವಿಭಾಗದ ಸಕಲೇಶಪುರ- ಸುಬ್ರಹ್ಮಣ್ಯ ರಸ್ತೆ ಮತ್ತು ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್-ಕುಲೇಮ್‌ನಂತಹ ಘಾಟ್ ವಿಭಾಗಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲ್ವೆ ಮೂಲಸೌಕರ್ಯ ಮತ್ತು ಅದರ ಪ್ರಯಾಣಿಕರ ಯೋಗಕ್ಷೇಮ ಕಾಪಾಡಲು ನೈಋತ್ಯ ರೈಲ್ವೆ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಸಕಾಲಿಕ ಹವಾಮಾನ ಎಚ್ಚರಿಕೆ ಎಚ್ಚರಿಕೆಗಳನ್ನು ಸ್ವೀಕರಿಸಲು ವ್ಯವಸ್ಥೆಗಳು ಜಾರಿಯಲ್ಲಿವೆ. ಭಾರೀ ಮಳೆ ಮತ್ತು ಚಂಡಮಾರುತದ ಮುನ್ಸೂಚನೆಗಳನ್ನು ಸ್ವೀಕರಿಸಿದ ನಂತರ ತನ್ನ ಪ್ರಾದೇಶಿಕ ಕಚೇರಿಗಳ ಕಂಟ್ರೋಲ್‌ ರೂಂಗಳು ಆಯಾ ನಿಲ್ದಾಣಗಳಿಗೆ ತ್ವರಿತವಾಗಿ ರವಾನಿಸುತ್ತವೆ.

ಈ ವಿಭಾಗಗಳಲ್ಲಿ ಇರುವ ಪ್ರತಿಯೊಂದು ದುರ್ಬಲ ಸ್ಥಳವನ್ನು ಸಂಬಂಧಪಟ್ಟ ವಿಭಾಗ ಎಂಜಿನಿಯರ್‌ಗಳು ಮುಂಗಾರು ಪೂರ್ವ ಪರಿಶೀಲನೆ ನಡೆಸಿದ್ದಾರೆ. ಅಂತಹ ಸ್ಥಳಗಳಲ್ಲಿ ಕಾವಲುಗಾರರು/ಗಸ್ತುಗಾರರನ್ನು ನಿಯೋಜಿಸಲಾಗಿದೆ. ಟ್ರ್ಯಾಕ್‌ಗಳಲ್ಲಿ ನೀರಿನ ಸಂಗ್ರಹ ತಡೆಗೆ ಕಸಗಳನ್ನು ತೆಗೆದುಹಾಕಲಾಗಿದೆ. ಹಳಿಗೆ ಅಪಾಯ ಉಂಟುಮಾಡುವ ಮರಗಳನ್ನು ತೆರವುಗೊಳಿಸಲಾಗಿದೆ.

ಸಂಚಾರಕ್ಕೆ ಅಡ್ಡಿಯುಂಟುಮಾಡುವ ಮರಗಳನ್ನು ಗುರುತಿಸಲು ಅಧಿಕಾರಿಗಳಿಂದ ವಿದ್ಯುದ್ದೀಕರಿಸಿದ ಪ್ರದೇಶಗಳ ಜಂಟಿ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. ಟ್ರ್ಯಾಕ್‌ನ ಸುರಕ್ಷತೆಗಾಗಿ ಅಂತಹ ಮರಗಳನ್ನು ಕತ್ತರಿಸಲಾಗಿದೆ/ಟ್ರಿಮ್ ಮಾಡಲಾಗಿದೆ.

ಕ್ಯಾಸಲ್ ರಾಕ್, ಕುಲೆಮ್, ತಿನೈಘಾಟ್, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮತ್ತು ಚಿತ್ರದುರ್ಗಗಳಲ್ಲಿ ಹಳಿ ಬದಿಯ ಬಂಡೆಗಳನ್ನು ಪರಿಶೀಲಿಸಲಾಗಿದೆ. ಆಯ್ದ ಸ್ಥಳಗಳಲ್ಲಿ ಹಿಟಾಚಿ, ಜೆಸಿಬಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಮರಳು ಚೀಲಗಳನ್ನು 90 ವ್ಯಾಗನ್‌ಗಳಲ್ಲಿ ತಂದಿದ್ದು, ಅಪಾಯದ ಸ್ಥಳಗಳಲ್ಲಿ ಇವುಗಳನ್ನು ಇರಿಸಲಾಗಿದೆ.

ಪ್ರಾಕೃತಿಕ ವಿಪತ್ತು ಸಂಭವಿಸಿದಲ್ಲಿ ಕೂಡಲೇ ಸ್ಪಂದನಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯ ನೆರವು ಪಡೆಯುವಂತೆ ಜನರಲ್ ಮೆನೇಜರ್ ಅರವಿಂದ ಶ್ರೀವಾಸ್ತವ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ