ಸಂಡೂರು: ಕೃಷಿಕ ಮಹಿಳೆಯರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಕೃಷಿಕರಿಗೆ ಕೃಷಿ ಜಮೀನು ಒಂದು ಪ್ರಯೋಗ ಶಾಲೆಯಾಗಿದೆ. ಕೃಷಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.
ದೇಶದ ಕೃಷಿ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ರೈತ ಮಹಿಳೆಯರಿಗೆ ತರಬೇತಿ, ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಕ್ರಿಯಾಶೀಲತೆ ಹೆಚ್ಚಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತ ಮಹಿಳೆಯರು ತಮ್ಮ ಮಕ್ಕಳಲ್ಲಿ ಕೃಷಿಯ ಬಗ್ಗೆ ಗೌರವ ಭಾವನೆ ಮೂಡಿಸಿ, ಸ್ವಾವಲಂಬನೆ ಸಾಧಿಸುವ ಪಾಠ ಕಲಿಸಬೇಕಿದೆ. ಮಹಿಳೆಯರು ತರಬೇತಿಯಲ್ಲಿನ ವಿಷಯಗಳನ್ನು ತಿಳಿದು, ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕು ಎಂದರು.
ಸ್ಕೋಡ್‌ವೆಸ್ ಹಾಗೂ ಜೆಎಸ್‌ಡಬ್ಲು ಫೌಂಡೇಶನ್ ಸಹಯೋಗದಲ್ಲಿ ಯೋಜಿತ ಸುವರ್ಣ ಸಂಡೂರು ನಿರ್ಮಾಣಕ್ಕಾಗಿ ಪ್ರಾಥಮಿಕ ಸಮೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಮೀಕ್ಷೆಗೆ ತಮ್ಮ ಗ್ರಾಮಗಳಿಗೆ ಸಮೀಕ್ಷಕರು ಬಂದ ಸಂದರ್ಭದಲ್ಲಿ ಜನತೆ ಅಗತ್ಯ ಮಾಹಿತಿ ನೀಡಬೇಕು. ಇದರಿಂದ ಮಹಿಳೆಯರು ಯಾವ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದ್ದಾರೆ ಎಂಬುದನ್ನು ಗಮನಿಸಿ, ಅದಕ್ಕನುಗುಣವಾಗಿ ಅವರನ್ನು ಆರ್ಥಿಕವಾಗಿ ಪ್ರೋತ್ಸಾಹಿಸುವ ವಿನೂತನ ಯೋಜನೆ ರೂಪಿಸಲಾಗುವುದು ಎಂದರು.ತರಬೇತಿ ಕಾರ್ಯಾಗಾರದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ವಿನೋದಕುಮಾರ್ ಪಶುಪಾಲನೆ ಕುರಿತು ಇರುವ ಸರ್ಕಾರದ ವಿವಿಧ ಯೋಜನೆಗಳು, ಡಾ.ತನ್ಮಯ್ ಪಶುಗಳ ಪ್ರಸೂತಿ, ಕರು ಪಾಲನೆ, ಪೋಷಕ ಆಹಾರ ಕುರಿತು, ಡಾ. ಅರವಿಂದ್ ಪ್ರಾಣಿಗಳಿಗೆ ಬರುವ ಕಾಯಿಲೆಗಳು ಹಾಗೂ ಲಸಿಕೆ ಹಾಗೂ ಡಾ. ವಲಿಬಾಷ ಜಾನುವಾರುಗಳಲ್ಲಿ ಕಂಡು ಬರುವ ಜಂತುಗಳು ಹಾಗೂ ನಿವಾರಣಾ ಕ್ರಮಗಳ ಕುರಿತು ತರಬೇತಿ ನೀಡಿದರು.
ತರಬೇತಿ ಶಿಬಿರದಲ್ಲಿ 150 ರೈತ ಮಹಿಳೆಯರು ಭಾಗವಹಿಸಿದ್ದರು. ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ಹಲವು ಸದಸ್ಯರು, ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ತಾಪಂ ಇಒ ಎಚ್.ಷಡಾಕ್ಷರಯ್ಯ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ, ಪಶುಪಾಲನಾ ಇಲಾಖೆ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.