ನಮ್ಮ ಮನಸ್ಥಿತಿ ಬದಲಾಗದ ಹೊರತು, ಪರಿಸ್ಥಿತಿ ಬದಲಾಗುವುದಿಲ್ಲ. ರಸ್ತೆ ಸುರಕ್ಷತೆ ನಮ್ಮಿಂದಲೇ ಆರಂಭವಾಗಬೇಕು. ನಮ್ಮ ನಡೆ ಇತರರಿಗೆ ಮಾದರಿಯಾಗಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1033ಕ್ಕೆ ಕರೆ ಮಾಡಿ ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಸ್ತೆ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡುವ ಮೂಲಕ ಅಪಘಾತಗಳ ನಿಯಂತ್ರಣಕ್ಕೆ ಕೈಜೋಡಿಸಬೇಕು. ನಿಯಮಗಳ ಅನುಸರಣೆಯಿಂದ ಅಪಘಾತ ತಡೆಯಲು ಏಕೈಕ ಮಾರ್ಗವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ‌.ಎ ಹೇಳಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಾರಿಗೆ, ಪೊಲೀಸ್, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ವಿಮಾ ಕಂಪನಿಗಳು, ಎನ್‌ಜಿಒ ಸಂಸ್ಥೆಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37ನೇ ರಸ್ತೆ ಸುರಕ್ಷತಾ ಅಭಿಯಾನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಶೇ.70ರಷ್ಟು ಅಪಘಾತಗಳು ಅತಿವೇಗದ ಚಾಲನೆಯಿಂದಲೇ ಸಂಭವಿಸಿವೆ. ಹೆಚ್ಚಿನ ಸಾವುಗಳು ಯುವ ಹಾಗೂ ಮಧ್ಯ ವಯಸ್ಸಿನವರಲ್ಲಿ ಸಂಭವಿಸುತ್ತಿವೆ. ರಸ್ತೆ ಅಪಘಾತ ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕರು ರಸ್ತೆ ಸುರಕ್ಷತಾ ನಿಯಮ ಅರಿತು, ಪಾಲನೆ ಮಾಡಬೇಕೆಂದರು.

ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ರಸ್ತೆ ಸುರಕ್ಷತೆ ನಮ್ಮಿಂದಲೇ ಆರಂಭವಾಗಬೇಕು. ತಡೆಗಟ್ಟಲು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯೇ ಜವಾಬ್ದಾರಿ ಅಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ನಿಯಮಗಳ ಪಾಲಿಸಿ ಬದಲಾವಣೆಗೆ ನಾಂದಿ ಹಾಡಬೇಕು. ಶೇ.50ರಷ್ಟು ಕಡಿಮೆ ವಯೋಮಾನದವರು ಅಪಘಾತಗಳಿಗೆ ಒಳಗಾಗಗುತ್ತಿದ್ದು, ಅತಿವೇಗದ ಚಾಲನೆ ಹಾಗೂ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯೇ ಅಪಘಾತಗಳ ಪ್ರಮುಖ ಕಾರಣಗಳಾಗಿದ್ದು, ಸಿಗ್ನಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಾನೂನಿನ ಅರಿವು-ನೆರವು ಮತ್ತು ಜಾಗೃತಿ ನಿರಂತರವಾಗಿರಬೇಕು. ಸಂಚಾರಿ ನಿಯಮಗಳ ಅರಿವು ಸಮಾಜದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ, ರಾ.ಹೆ. ಪ್ರಾಧಿಕಾರ ಕಾರ್ಯಪಾಲಕ ಅಭಿಯಂತರ ವಿಜಯ ಪಾಟೀಲ, ಬಾಗಲಕೋಟೆ ವಿಭಾಗ-1ರ ರಾ.ಹೆ. ಪ್ರಾಧಿಕಾರದ ಪವನ ಗುರುವೆ, ಪ.ಪೂ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ಹೊಸಮನಿ, ವಿಜಯಪುರ ವಿಭಾಗದ ಕಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ, ಜಿಲ್ಲಾ ನ್ಯಾಯವಾದಿಗಳ ಸಂಘ ಅಧ್ಯಕ್ಷ ಡಿ.ಜಿ.ಬಿರಾದಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಜನಜಾಗೃತಿ ಜಾಥಾ:

ರಸ್ತೆ ಅಪಘಾತಗಳ ನಿಯಂತ್ರಣ ಹಾಗೂ ಜೀವ ರಕ್ಷಣೆ ಮಹತ್ವ ಮನವರಿಕೆ ಮಾಡುವ ಉದ್ದೇಶದಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜನಜಾಗೃತಿ ಜಾಥಾವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಚಾಲನೆ ನೀಡಿದರು. ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ ನಂತರ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ರಸ್ತೆ ಸುರಕ್ಷತಾ ಅರಿವು ಮೂಡಿಸಬೇಕು. ಪಾಲಕರು ಚಿಕ್ಕ ಮಕ್ಕಳಿಗೆ ವಾಹನ ಚಾಲನೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಸುರಕ್ಷತಾ ದೃಷ್ಟಿಯಿಂದ ಹಿಂಬದಿ ಸವಾರರೂ ಸೇರಿದಂತೆ ಹೆಲ್ಮೆಟ್ ಧರಿಸಬೇಕು. ಮೋಟಾರ್ ಸೈಕಲ್ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದು ಸಾವಿನ ಪ್ರಮಾಣ ಹೆಚ್ಚಿದ್ದು, ಕೆಲವೊಮ್ಮೆ ತಲೆಗಾಗುವ ಸಣ್ಣ ಗಾಯವೂ ಅನಾಹುತ ತಂದೊಡ್ಡುತ್ತದೆ. ಈ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ.

ಹರೀಶ‌.ಎ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ರಸ್ತೆ ಅಪಘಾತಗಳನ್ನು ತಡೆಯಲು ಸಾರ್ವಜನಿಕರ ಶೇ.90ರಷ್ಟು ಸಹಭಾಗಿತ್ವ ಅತ್ಯಗತ್ಯ. ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ವಿವಿಧ ಇಲಾಖೆಗಳ ಸಮನ್ವಯ ಅಗತ್ಯವಿದೆ.- ಲಕ್ಷ್ಮಣ ನಿಂಬರಗಿ, ಪೊಲೀಸ್ ವರಿಷ್ಠಾಧಿಕಾರಿ