ಹಲಸಿನ ಮರ ಹತ್ತಿದ ಕಾರ್ಮಿಕನ ಮೇಲೆ ಗುಂಡು ಹಾರಿಸಿ ಕೊಲೆ

KannadaprabhaNewsNetwork |  
Published : Dec 29, 2024, 01:16 AM IST
ಕೊಲೆ | Kannada Prabha

ಸಾರಾಂಶ

ಸಾಂಬಾರು ಮಾಡಲು ಹಲಸಿನ ಕಾಯಿ ಕೊಯ್ಯಲು ಮರ ಹತ್ತಿದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಸಾಂಬಾರು ಮಾಡಲು ಹಲಸಿನ ಕಾಯಿ ಕೊಯ್ಯಲು ಮರಹತ್ತಿದ ವ್ಯಕ್ತಿಯ ಮೇಲೆ ವ್ಯಕ್ತಿಯೋರ್ವನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಮೂರ್ನಾಡು ನಿವಾಸಿ ಪಣಿ ಎರವರ ತಮ್ಮು ಎಂಬುವವರ ಹಿರಿಯ ಪುತ್ರ ಹಾಗೂ ಚೆಂಬೆಬೆಳ್ಳೂರು ಗ್ರಾಮ ಪಿ. ಭನ್ಸಿ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ಪಣಿ ಎರವರ ಪೊನ್ನು 31ವರ್ಷ ಗುಂಡೇಟಿನಿಂದ ಕೊಲೆಗೀಡಾದ ವ್ಯಕ್ತಿ.

ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಮಾಜಿ ಸೈನಿಕ ಹಾಗೂ ಎಸ್.ಬಿ.ಐ. ವಿರಾಜಪೇಟೆ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಪೊರ್ಕಂಡ ಚಿಣ್ಣಪ್ಪ ಕೊಲೆ ಮಾಡಿದ ವ್ಯಕ್ತಿ.

ಘಟನೆ ವಿವರ:

ಕಾರ್ಮಿಕ ದಂಪತಿಗಳಾದ ಪಣಿ ಎರವರ ಪೊನ್ನು ಮತ್ತು ಗೀತಾ ವಿವಿಧೆಡೆಗಳ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿದು ಸುಮಾರು 8 ತಿಂಗಳ ಹಿಂದೆ ವಿರಾಜಪೇಟೆ ಚೆಂಬೆಬೆಳ್ಳೂರು ಗ್ರಾಮದ ಪಿ.ಪೂಣಚ್ಚಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ಕೊಲೆ ಮಾಡಿರುವ ವ್ಯಕ್ತಿ ಚಿಣ್ಣಪ್ಪ ಮತ್ತು ಕಾರ್ಮಿಕ ದಂಪತಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ತೋಟದ ಮಾಲೀಕರಿಗೆ ಚಿಕ್ಕಪ್ಪನಾಗಬೇಕು.

ಡಿ. 27ರಂದು ನಡೆದ ಘಟನೆ:

ಅಂದು ಎಂದಿನಂತೆ ಕಾರ್ಮಿಕ ದಂಪತಿ ಕಾಫಿ ತೋಟಕ್ಕೆ ತೆರಳಿ ಕಾಯಕ ಮುಗಿಸಿ ಮನೆಗೆ ಹಿಂದಿರುಗಿದ್ದರು. ಸಂಜೆ ವೇಳೆಯಲ್ಲಿ ಮೃತನ ಪತ್ನಿ ಗೀತಾ ರಾತ್ರಿಯ (ಊಟಕ್ಕೆ) ಸಾರಿಗಾಗಿ ತರಕಾರಿ ಇಲ್ಲಾ ಏನು ಮಾಡುವುದು ಎಂದು ಪತಿಯ ಬಳಿ ತಿಳಿಸಿದ್ದಾಳೆ. ಮೃತ ಪೊನ್ನು ಮತ್ತು ಗೀತಾ ಇರ್ವರು ತೋಟದ ಸನಿಹದ ಭಾಗಗಕ್ಕೆ ತೆರಳಿದ್ದಾರೆ. ಚಿಣ್ಣಪ್ಪ ಅವರ ತೋಟದ ಅಂಚಿನಲ್ಲಿದ್ದ ಹಲಸಿನ ಮರ ಒಂದು ಗೋಚರಿಸಿದೆ. ಮರದಲ್ಲಿದ್ದ ಹಲಸಿನ ಕಾಯಿ ಕೊಯ್ಯಲು ಮೃತ ಪೊನ್ನು ಮರವೇರಿದ್ದಾನೆ. ಈ ಸಂದರ್ಭ ತೋಟದ ಮಾಲೀಕ ಚಿಣ್ಣಪ್ಪ ಕೋವಿ ಹೊತ್ತು ತನ್ನ ಸಾಕು ನಾಯಿಯೊಂದಿಗೆ ಆಗಮಿಸಿದ್ದಾನೆ. ಮರದಲ್ಲಿದ್ದ ಪೊನ್ನು ಕಂಡು ಮತ್ತೊಮ್ಮೆ ಅವಾಚ್ಯ ಪದಗಳಿಂದ ನಿಂದಿಸಿ ಗುಂಡು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಗುಂಡು ಹೊಡೆಯಬೇಡಿ ಎಂದು ಅಂಗಲಾಚಿದ್ದಾನೆ. ಪತ್ನಿ ಗೀತಾ ಕೂಡ ಹೊಡೆಯಬೇಡಿ ಎಂದು ಮನವಿ ಮಾಡಿದ್ದಾಳೆ. ಮನವಿಗೆ ಒಲ್ಲೆ ಎಂದ ಚಿಣ್ಣಪ್ಪ ತನ್ನ ಎಸ್.ಬಿ.ಬಿ.ಎಲ್. ಕೋವಿಯಿಂದ ಗುಂಡು ಹೊಡೆದಿದ್ದಾನೆ. ಕೋವಿಯಿಂದ ಹೊರಟ ಗುಂಡು ಪೊನ್ನುವಿನ ಎದೆ ಸೀಳಿದೆ. ಗಾಯಗೊಂಡ ಪೊನ್ನು ಮರದಿಂದ ನೆಲೆಕ್ಕೆ ಉರುಳಿದ್ದಾನೆ. ಇತ್ತ ಗುಂಡು ಹೊಡೆದು ಘಾಸಿ ಗೊಳಿಸಿದ ಚಿಣ್ಣಪ್ಪ ಕೋವಿಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ರಕ್ತಸಿಕ್ತವಾಗಿದ್ದ ಪೊನ್ನು ನನ್ನನ್ನು ಉಳಿಸು ಎಂದು ಪತ್ನಿಯ ಕೈಹಿಡಿದು ಬೇಡಿದ್ದಾನೆ. ಅಸಹಾಯಕಳಾಗಿದ್ದ ಗೀತ ತನ್ನ ಬಳಿಯಿದ್ದ ಮೊಬೈಲ್ ನಿಂದ ತನ್ನ ಮಾಲೀಕರಿಗೆ ಕರೆ ಮಾಡಿದ್ದಾಳೆ. ಮಾಲೀಕರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಗಾಯಳುವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮರಣಹೊಂದಿದ್ದಾರೆ ಎಂದು ಧೃಡಿಕರಿಸಿದರು.

ಮೃತರ ಪತ್ನಿ ಗೀತಾ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೋಲಿಸು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಆರೋಪಿಯಾಗಿರುವ ಚಿಣ್ಣಪ್ಪ ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿರುವ ಸೆ.ಬಿ.ಬಿ.ಎಲ್ ಕೋವಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!