ಕನ್ನಡಪ್ರಭ ವಾರ್ತೆ ಉಡುಪಿ
ಕಾರ್ಯಕ್ರಮಕ್ಕೆ ಬೈಬಲ್ ಗ್ರಂಥಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗುವುದರ ಮೂಲಕ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರೀತಿ ಮತ್ತು ಕ್ಷಮೆಯ ಗುಣಗಳ ಮೂಲಕ ಓರ್ವ ಉತ್ತಮ ನಾಯಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿಯ ಮೂಲಕ ಇಡೀ ವಿಶ್ವದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿ ತೋರಿಸಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ. ಯೇಸು ಸ್ವಾಮಿಯವರು ತೋರಿಸಿಕೊಟ್ಟ ಮೌಲ್ಯಗಳೊಂದಿಗೆ ನಾವು ಬದುಕಿದಾಗ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒರ್ವ ಮಾದರಿ ನಾಯಕನಾಗಲು ಸಾಧ್ಯವಿದೆ ಎಂದರು.ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, 2025 ಯೇಸು ಸ್ವಾಮಿಯ ಹುಟ್ಟಿನ ಜುಬಿಲಿ ಆಚರಣೆಯಿದ್ದು, ಇದಕ್ಕೆ ಪೂರಕವಾಗಿ ಈ ವರ್ಷವನ್ನು ಪ್ರಾರ್ಥನೆಯ ವರ್ಷವಾಗಿ ಘೋಷಿಸಲಾಗಿದೆ. ಯುವ ಜನರು ಹೇಗೆ ಆಟೋಟ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅದೇ ರೀತಿ ಆಧ್ಯಾತ್ಮಿಕ ವಿಚಾರಗಳಿಗೂ ಕೂಡ ಅವರುಗಳು ಆಸಕ್ತಿ ತೋರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ತೊಟ್ಟಮ್ ಸಂತ ಅನ್ನಮ್ಮ ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ಸುಷ್ಮಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಗೊಡ್ವಿನ್ ಮಸ್ಕರೇನ್ಹಸ್, ವಲಯ ಅಧ್ಯಕ್ಷ ಲೊಯ್ಡ್ ಕರ್ನೆಲಿಯೊ, ತೊಟ್ಟಂ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನಿಲ್ ಫೆರ್ನಾಂಡಿಸ್, ಐಸಿವೈಎಮ್ ಸಚೇತಕ ಲೆಸ್ಲಿ ಆರೋಝಾ, ಆಲಿಸ್ ಮಿನೇಜಸ್ ಉಪಸ್ಥಿತರಿದ್ದರು. ತೊಟ್ಟಂ ಐಸಿವೈಎಮ್ ಅಧ್ಯಕ್ಷರಾದ ಸ್ಯಾಮುವೆಲ್ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಿಯಾಂಕ ಮಾರ್ಟಿಸ್ ವಂದಿಸಿದರು.