ಸದಸ್ಯತ್ವ ನೋಂದಣಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ, ಪಕ್ಷದ ಬಲವರ್ಧನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳಹದಗೆಟ್ಟ ರಸ್ತೆ ಹಾಗೂ ಅಭಿವೃದ್ಧಿ ಕಡೆಗಿನ ನಿರ್ಲಕ್ಷದ ವಿರುದ್ಧ ಜೆಡಿಎಸ್ ಕೊಪ್ಪಳದಲ್ಲಿ ಜನಾಂದೋಲನ ಪ್ರಾರಂಭಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ಮಂಗಳವಾರ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಪಕ್ಷದ ಪ್ರಮುಖರ ಸಭೆಯಲ್ಲಿ ಸದಸ್ಯತ್ವ ನೋಂದಣಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ, ಪಕ್ಷದ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೊಪ್ಪಳದಲ್ಲಿ ಬಾಣಂತಿಯರ ಸಾವು, ಹದಗೆಟ್ಟ ರಸ್ತೆ, ಧೂಳು ತುಂಬಿದ ವಾತಾವರಣ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕುರಿತ ವರದಿಗಳು ದಿನನಿತ್ಯ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿವೆ. ದುರಾಡಳಿತ ಹಾಗೂ ಅಭಿವೃದ್ಧಿ ಬಗೆಗಿನ ನಿರ್ಲಕ್ಷದ ವಿರುದ್ಧ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ನಾನು ವಿವಿಧ ಹೋಬಳಿಗಳಿಗೆ ಭೇಟಿ ನೀಡಿ, ಪಕ್ಷ ಸಂಘಟಿಸಿ ಜಿಲ್ಲೆಯಾದ್ಯಂತ ವ್ಯವಸ್ಥೆ ವಿರುದ್ಧ ಜನಾಂದೋಲನ ರೂಪಿಸುತ್ತೇನೆ. ಆ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಒತ್ತಡ ತರುತ್ತೇನೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವ ಕ್ಷಣದಲ್ಲಾದರೂ ನಡೆಯಬಹುದು. ಅದಕ್ಕಾಗಿ ನಾವು ಸಿದ್ಧವಾಗಿರಬೇಕು. ಗ್ರಾಮೀಣ, ಬೂತ್ ಮಟ್ಟ ಹಾಗೂ ಹೋಬಳಿ ಮಟ್ಟದಲ್ಲಿ ಸದಸ್ಯತ್ವವನ್ನು ವ್ಯಾಪಕವಾಗಿ ಮಾಡಬೇಕು. ಸಂಘಟನೆ ಹಾಗೂ ಸಮಾವೇಶಗಳನ್ನು ನಿರಂತರವಾಗಿ ನಡೆಸಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದು ಶತಸಿದ್ಧ ಎಂದರು.ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ರಾಜ್ಯ ನಾಯಕರು ಸದಸ್ಯತ್ವ ನೊಂದಣಿ ಹಾಗೂ ಚುನಾವಣಾ ಕುರಿತಾಗಿ ಕೆಲವು ಸಲಹೆ ನೀಡಿದ್ದಾರೆ. ಅವುಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಎಂದರು.ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ, ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಮಾತನಾಡಿದರು.
ಪ್ರಮುಖರಾದ ಮಂಜುನಾಥ್ ಸೊರಟೂರ್, ದೇವಪ್ಪ ಕಟ್ಟಿಮನಿ, ಈಶಪ್ಪ ಮಾದಿನೂರ, ಸಂಗಮೇಶ್ ದಂಬಳ, ಮಲ್ಲನಗೌಡ ಕೋಣನಗೌಡ್ರ, ಶರಣಪ್ಪ ಕುಂಬಾರ್, ಶರಣಪ್ಪ ಜಡಿ, ಮೂರ್ತೆಪ್ಪ ಗೀಣಗೇರಿ, ಯಮನಪ್ಪ ಕಟಿಗಿ, ದೇವರಾಜ ಮಡ್ಡಿ, ಪ್ರಕಾಶ ಬಸರೀಗಿಡ, ಕರಿಯಪ್ಪ ಹಾಲವರ್ತಿ, ರಮೇಶ ದಂಬ್ರಳ್ಳಿ, ಸೋಮನಗೌಡ, ಶಿವಕುಮಾರ ಕುಣಕೇರಿ, ರವಿ ಮಾಗಳ, ಕಳಕನಗೌಡ, ವಜ್ರಪ್ಪ ಕನಕಪುರ, ಮಲ್ಲಪ್ಪ ಹಂದ್ರಾಳ, ಮಾರುತಿ ಪೇರ್ಮಿ, ಶಂಕರಗೌಡ ಬೆಳಗಟ್ಟಿ, ವಸಂತ ಹಟ್ಟಿ, ಮೈಲಾರಪ್ಪ ಗುಳದಳ್ಳಿ, ರವಿ ಮೇಧಾರ, ಮಹೇಶ ಆಗಳಕೇರಿ, ಗ್ಯಾನಪ್ಪ, ಬಸವರಾಜ, ದೇವರಾಜ ಅಗಳಕೇರಾ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು.