ಅದ್ಧೂರಿಯಾಗಿ ನಡೆದ ಆನೇಕಲ್‌ ಕರಗ

KannadaprabhaNewsNetwork | Published : May 26, 2024 1:38 AM

ಸಾರಾಂಶ

ಇತಿಹಾಸ ಪ್ರಸಿದ್ಧ ಆನೇಕಲ್ ಕರಗ ಅದ್ಧೂರಿಯಾಗಿ ಜರುಗಿತು. ಗುರುವಾರ ರಾತ್ರಿ ಮೂರನೇ ಜಾವದಲ್ಲಿ ಗುಡಿಯಿಂದ ಮಂಡಿಕಾಲಿನಲ್ಲಿ ಹೊರಬಂದ ಕರಗ ಶಕ್ತಿ ದೇವತೆಯನ್ನು ವೀರ ಬಾಲಕರು ಅಲಗು ಸೇವೆ ನೀಡಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಆನೇಕಲ್

ಇತಿಹಾಸ ಪ್ರಸಿದ್ಧ ಆನೇಕಲ್ ಕರಗ ಅದ್ಧೂರಿಯಾಗಿ ಜರುಗಿತು. ಗುರುವಾರ ರಾತ್ರಿ ಮೂರನೇ ಜಾವದಲ್ಲಿ ಗುಡಿಯಿಂದ ಮಂಡಿಕಾಲಿನಲ್ಲಿ ಹೊರಬಂದ ಕರಗ ಶಕ್ತಿ ದೇವತೆಯನ್ನು ವೀರ ಬಾಲಕರು ಅಲಗು ಸೇವೆ ನೀಡಿ ಸ್ವಾಗತಿಸಿದರು.

ದೇಗುಲದಿಂದ ಹೊರಬಂದ ಕರಗ ದೇವತೆ ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕಿ ಆವರಣದಿಂದ ಹೊರ ಬಂದಾಗ ನೆರೆದಿದ್ದ ಜನಸ್ತೋಮ ಗೋವಿಂದ ಗೋವಿಂದ ಎಂಬ ಉದ್ಘಾರದೊಂದಿಗೆ ಮಲ್ಲಿಗೆಯ ಮೊಗ್ಗುಗಳನ್ನು ದೇವಿಯ ಮೇಲೆ ಎಸೆದು ಭಕ್ತಿ ಭಾವದಿಂದ ನಮನ ಸಲ್ಲಿಸಿದರು.

ಸಮೀಪದ ಶ್ರೀ ಭವಾನಿ ಶಂಕರ ಮತ್ತು ಶಂಕರಾಚಾರ್ಯರ ದೇಗುಲದಲ್ಲಿ ಆರತಿ ಪಡೆದ ಕರಗ ಸಂತೆ ಮಾಳದಲ್ಲಿ ಪ್ರತಿಷ್ಠಾಪಿಸಿದ್ದ ವೀರ ವಸಂತ ಮೂರ್ತಿಯತ್ತ ತೆರಳಿ ನಮನ ಸಲ್ಲಿಸಿ ಪುರ ಮೆರವಣಿಗೆಗೆ ಹೊರಟಿತು. ಬಾಲ ಗಂಗಾಧರ ತಿಲಕ್ ಚೌಕದಲ್ಲಿ ವೃತ್ತದಲ್ಲಿ ಅಲಂಕೃತಗೊಂಡ 20ಕ್ಕೂ ಹೆಚ್ಚಿನ ಮುತ್ತಿನ ಪಲ್ಲಕ್ಕಿಗಳ ನಡುವೆ ಮೈದುಂಬಿ ನಾದಸ್ವರಕ್ಕೆ ಹೆಜ್ಜೆ ಹಾಕಿದ ಕರಗ ದೇವತೆಯ ಕುಣಿತವನ್ನು ಕಂಡ ಜನತೆ ಭಾವುಕರಾಗಿ ನಮಿಸಿದರು.

ಅಲ್ಲಿಂದ ಪುರ ಮೆರವಣಿಗೆ ಸಾಗಿ ಬಂದ ಕರಗವನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ವೃತ್ತಗಳಲ್ಲಿ ಜಮಾಯಿಸಿದ ಜನರು ಭಾವ ಪರವಶರಾಗಿ ನೋಡಿ ಕಣ್ತುಂಬಿ ಕೊಂಡರು. ಬೆಳಗಿನ ಜಾವ ಆರು ಗಂಟೆಗೆ ಕರಗಶಕ್ತಿ ದೇವತೆ ಸ್ವಸ್ಥಾನ ತಲುಪಿತು.ಆನೇಕಲ್ ಕರಗ ವಿಶೇಷ

ಪ್ರತಿ ವರ್ಷದಂತೆ ಆನೇಕಲ್ ಕರಗ ಬೆಂಗಳೂರು ಕರಗ ನಡೆಯುವ ವೈಶಾಖ ಶುದ್ಧ ಪೌರ್ಣಮಿ ನಡೆಯಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣ ವೈಶಾಖ ಶುದ್ಧ ಪೌರ್ಣಮಿ ಗುರುವಾರ ನಡೆಯಿತು.

ಕರಗ ಪ್ರಯುಕ್ತ ಆನೇಕಲ್ ನಗರ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ನವ ವದುವಿನಂತೆ ಕಂಗೊಳಿಸುತ್ತಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಕರಗ ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರ ಹರಿದು ಬಂದಿತು. ಕರಗ ಉತ್ಸವ ಪ್ರಯುಕ್ತ ಆನೇಕಲ್ಲಿನ ವರ್ತಕರ ಸಂಘದವರು ರಾತ್ರಿ ಇಡಿ ಅನ್ನದಾನ ಸೇವೆ ಮಾಡಿದರು.

Share this article