ಕನ್ನಡಪ್ರಭ ವಾರ್ತೆ ಮದ್ದೂರು
ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಸಂಹಾರ ಮಾಡಿದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಾಜಿ ಸೈನಿಕರು, ಪ್ರಗತಿಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಪಟ್ಟಣದಲ್ಲಿ ಬುಧವಾರ ಬೃಹತ್ ತಿರಂಗಾ ಯಾತ್ರೆ ನಡೆಸಿತು.ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ವೈದ್ಯನಾಥಪುರದ ಜಂಗಮ ಮಠದ ಪೀಠಾಧ್ಯಕ್ಷ ರೇಣುಕಾ ಶಿವಾಚಾರ್ಯ, ಚಂದು ಪುರ ಮಠದ ಶಿವಲಿಂಗ ಮಹಾಸ್ವಾಮಿಗಳು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಕೋಟೆ ಬೀದಿಯ ಶ್ರೀ ಉಗ್ರ ನರಸಿಂಹ ಸ್ವಾಮಿ ದೇಗುಲದವರೆಗೆ ಬೃಹತ್ ಮೆರವಣಿಗೆ ನಡೆಸಿದ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು 300 ಅಡಿ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಯಲ್ಲಿ ಸಾಗಿದರೆ ಸಾರ್ವಜನಿಕರು ಪಕ್ಷಾತೀತವಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಭಾರತೀಯ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಿದರು.ಪಾಕಿಸ್ತಾನದ ಭಯೋತ್ಪಾದಕರ ರನ್ನು ಆಪರೇಷನ್ ಸಿಂದೂರ ಹೆಸರಿನಲ್ಲಿ ಮಟ್ಟ ಹಾಕಿದ ಭಾರತೀಯ ಸೈನಿಕರ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ದೇಶಪ್ರೇಮ ಮೆರೆದರು.
ಕೋಟೆ ಬೀದಿಯ ಶ್ರೀಉಗ್ರ ನರಸಿಂಹ ಸ್ವಾಮಿ ದೇಗುಲದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ನಿವೃತ್ತ ಪ್ರಾಂಶುಪಾಲ ಪ್ರೊ.ರಾಜು, ಅರ್ಚಕ ರಾಘವೇಂದ್ರ, ಎಸ್.ಪಿ.ಸ್ವಾಮಿ ಮತ್ತಿತರರು ಮಾತನಾಡಿ, ಕಾಶ್ಮೀರದ ಸೊಬಗನ್ನು ಸವಿಯಲು ಕುಟುಂಬ ಸಮೇತ ಹೋಗಿದ್ದ ಭಾರತೀಯರ ಮೇಲೆ ಪಾಕಿಸ್ತಾನದ ಉಗ್ರರು ಹತ್ಯೆ ನಡಿಸಿ ಅಮಾನೀಯವಾಗಿ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.ಉಗ್ರರ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತ ಕಾರ್ಯಾಚರಣೆ ನಡೆಸಿ ತಕ್ಕ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ದೇಶ ಕಾಯುವ ಭಾರತದ ಯೋಧರಿಗೆ ಮಾನಸಿಕ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ನಿವೃತ್ತ ಸೈನಿಕರಾದ ಸ್ವಾಮಿ, ಬಸವರಾಜು, ಸುರೇಶ, ಕುಮಾರ್, ಬಿಜೆಪಿ ಮುಖಂಡರಾದ ಶಿವದಾಸ್ ಸತೀಶ್ , ಮನು ಕುಮಾರ್, ಹಾಗಲಹಳ್ಳಿ ರಘು, ಶ್ವೇತಾ, ತ್ರಿವೇಣಿ, ರಂಜಿತಾ, ಜಿ.ಸಿ. ಮಹೇಂದ್ರ, ಎಂ.ಸಿ.ಸಿದ್ದು , ಕದಲೂರು ಯೋಗಾನಂದ, ಸಂಘಟನೆಗಳ ಮುಖಂಡರಾದ ವಿ.ಸಿ.ಉಮಾಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಸ್ವಾರ್ಥ ರಾಜಕಾರಣ ಬದಿಗಿಡಿ: ರೇಣುಕಾ ಶಿವಾಚಾರ್ಯ ಸ್ವಾಮೀಜಿಮದ್ದೂರು:
ರಾಜಕಾರಣಿಗಳು ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡದೇ, ಪಕ್ಷಗಳನ್ನು ಬದಿಗಿಟ್ಟು ದೇಶದ ರಕ್ಷಣೆಗೆ ಚಿಂತನೆ ನಡೆಸಬೇಕು ಎಂದು ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಿರಂಗಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಇಂದಿನ ರಾಜಕಾರಣಿಗಳಲ್ಲಿ ದೇಶ ಪ್ರೇಮಗಿಂತ ಸ್ವಾರ್ಥ ಪ್ರೇಮ ಹೆಚ್ಚಾಗಿದೆ. ನಾನು ನನ್ನ ಕುಟುಂಬ ಐಷಾರಾಮಿ ಜೀವನ ನಡೆಸಿದರೆ ಸಾಕು ದೇಶ ಹಾಳಾದರೆ ನಮಗೇಕೆ ಚಿಂತೆ ಎಂಬ ಮನೋಭಾವದಿಂದ ರಾಜಕಾರಣದಲ್ಲಿ ತೇಲಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರ ನಾಡು ಕಾಯುವ ಯುವಕರು ಎಚ್ಚರ ವಹಿಸಬೇಕು ಎಂಬ ಸಂದೇಶ ನೈಪತ್ಯಕ್ಕೆ ಸರಿದಿದೆ. ಐಷಾರಾಮಿ ಬದುಕಿಗೆ ಮಾರು ಹೋಗಿರುವ ಹೋಗಿರುವ ಯುವಕರು ದೇಶಪ್ರೇಮ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳನ್ನು ಬದಿಗಿಟ್ಟು ದೇಶದ ರಕ್ಷಣೆಗೆ ಮುಂದಾಗುವ ಮೂಲಕ ಗಡಿ ಕಾಯುವ ಯೋಧರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದರು.