ಹೊನ್ನಾವರ: ತಾಲೂಕಿನಲ್ಲಿ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಬುಧವಾರ ತಾಲೂಕಿನ ಆಡಳಿತ ಸೌಧದ ಸಭಾಭವನದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆಯಲ್ಲಿ ಮಳೆಗಾಲ ಪೂರ್ವ ನೋಡಲ್ ಅಧಿಕಾರಿಗಳ ಸಭೆ ಜರುಗಿತು.ಸಭೆಯ ಆರಂಭದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಘಟನೆಗಳನ್ನು ಉಲ್ಲೇಖಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪೂರ್ವ ಸಿದ್ಧತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ತಾಲೂಕಿನಲ್ಲಿ 26 ಗ್ರಾಪಂ ಹಾಗೂ ಎರಡು ಪಪಂ ಇದ್ದು, 23 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಳೆಗಾಲದ ಸಮಯದಲ್ಲಿ ಇಲಾಖೆಯ ಕಾರ್ಯಕ್ರಮದ ಜೊತೆ ತಮ್ಮ ಜವಾಬ್ದಾರಿಯ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿ ಸಂಭವಿಸಿದಾಗ ಕೂಡಲೇ ಸ್ಪಂದಿಸುವ ಜೊತೆಗೆ ನೆರೆಹಾವಳಿ ಸಂಭವಿಸುವ ಪ್ರದೇಶದ ಜನತೆಯನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ಕರೆತರಬೇಕು ಎಂದು ಸೂಚಿಸಿದರು.ಯಾವುದೇ ಸಮಸ್ಯೆಗಳಿದ್ದರೂ ದಿನವಿಡೀ ಕಂಟ್ರೋಲ್ ರೂಂ ನಂ. 08387-220262 ತೆರೆಯಲಾಗಿದೆ ಎಂದರು.
ಮಳೆಹಾನಿ ಮತ್ತು ನೆರೆಹಾವಳಿ ಸಂದರ್ಭದಲ್ಲಿ ಜನರ ಸಂಕಷ್ಟದಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸಬೇಕು. ಸಾರ್ವಜನಿಕರಿಂದಾಗಲಿ ಅಥವಾ ಮಾಧ್ಯಮದವರಿಂದಾಗಲಿ ಮಳೆ, ಪ್ರವಾಹ ಅಥವಾ ಇನ್ಯಾವುದೇ ಪ್ರಕೃತಿ ವಿಕೋಪದಿಂದ ಹಾನಿಯಾದ ಮಾಹಿತಿ ಸಿಕ್ಕಲ್ಲಿ ಸ್ಥಳಕ್ಕೆ ತಂಡವಾಗಿ ಭೇಟಿ ನೀಡಿ ಪರೀಶೀಲಿಸಿ ಸ್ಪಂದಿಸುವಂತೆ ಸೂಚಿಸಿದರು. ಸಭೆಗೆ ಆಗಮಿಸಿದ ನೋಡಲ್ ಅಧಿಕಾರಿಗಳಿಗೆ ನೋಟಿಸ್ ನೀಡವಂತೆ ಸೂಚಿಸಿದರು.ಪ್ರತಿಯೊಂದು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅವಲೋಕಿಸಿ ಮೂಲಭೂತ ಸೌಕರ್ಯಗಳು ಇದೆಯೇ ಎನ್ನುವುದನ್ನು ಪರಿಶೀಲಿಸಿ ಎಂದರು.
ಬೋಟ್‌ಗಳ ಲಭ್ಯತೆ ಹಾಗೂ ಸುಸ್ಥಿತಿಯಲ್ಲಿರುವ ಬಗ್ಗೆ ತಿಳಿದುಕೊಳ್ಳಿ. ಪ್ರತಿಯೊಬ್ಬ ಅಧಿಕಾರಿಯು ಪ್ರವಾಹ ಸ್ಥಳ ಅಥವಾ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿರುವ ಫೋಟೋ ತಾಲೂಕಾಡಳಿತಕ್ಕೆ ಕಳುಹಿಸಬೇಕು ಎಂದರು.ಪ್ರವಾಹ ಪರಿಸ್ಥಿತಿ ಉದ್ಭವಿಸುವ ಸ್ಥಳಗಳನ್ನು ಗುರುತಿಸಿ ಆ ಭಾಗದ ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರ ಸಹಕಾರದ ಮೇರೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಪ್ರಕೃತಿ ವಿಕೋಪ ಉಂಟಾದಾಗ ಸ್ಪಂದನೆ ನಡೆಸಬೇಕು. ಕಾಳಜಿ ಕೇಂದ್ರದಲ್ಲಿ ನೀರು, ವಿದ್ಯುತ್ ಊಟ ವಸತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಪಾಕೃತಿಕ ವಿಕೋಪದಡಿ ಮೃತಪಟ್ಟ ಕುಟುಂಬಗಳಿಗೆ 48 ಗಂಟೆಯಲ್ಲಿ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಪಂ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು, ನೋಡಲ್ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಹಾನಿ ಸಂಭವಿಸಿದರೆ ಕೂಡಲೇ ಪರಿಹಾರಕ್ಕೆ ಕ್ರಮ ಕೈಗೊಳ್ಳವಂತೆ ಇದೆ ವೇಳೆ ಸೂಚಿಸಿದರು.
ಶಾಲೆ ಹಾಗೂ ಅಂಗನವಾಡಿ ಸುತ್ತಮುತ್ತಲಿನ ಪ್ರದೇಶದ ಅರಣ್ಯಭೂಮಿ ಕುಸಿಯುವ ಭೀತಿ ಇದ್ದರೆ ಅದನ್ನು ಸರಿಪಡಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯ ಚಾವಣಿ, ಕುಸಿಯುವ ಹಂತದ ಗೋಡೆಗಳಿದ್ದರೆ ಅಲ್ಲಿ ಮಕ್ಕಳು ಸಂಚರಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಹಶೀಲ್ದಾರರು ತಿಳಿಸಿದರು.ಮುಗ್ವಾ ಗ್ರಾಪಂ ಆವರಣದಲ್ಲಿರುವ ಮಳೆ ಮಾಪನ ಕೆಟ್ಟಿರುವ ಬಗ್ಗೆ ಕಳೆದ ವರ್ಷವೇ ಮಾಹಿತಿ ನೀಡಿದರೂ ದುರಸ್ತಿ ಆಗದೇ ಇರುವ ಬಗ್ಗೆ ಪಿಡಿಒ ಕವಿತಾ ಸಭೆಯ ಗಮನಕ್ಕೆ ತಂದಾಗ, ಕೂಡಲೇ ದುರಸ್ತಿಪಡಿಸುವಂತೆ ಸಂಭದಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಳದಿಪುರ ಬಡಗಣಿ ನದಿಯ ನೀರು ರೈತರ ಜಮೀನು ಹಾಗೂ ಮನೆಗಳಿಗೆ ನುಗ್ಗದಂತೆ ಕ್ರಮ ಕೈಗೊಳ್ಳಲು ಹಳದೀಪುರ ಪಿಡಿಒ ಜಿ.ಎಲ್.ನಾಯ್ಕ ತಿಳಿಸಿದಾಗ, ಸಣ್ಣನೀರಾವರಿ ಇಲಾಖೆ ವತಿಯಿಂದ ಮುಂಬರುವ ದಿನದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ ಮಟ್ಟದಲ್ಲಿ ಚರಂಡಿ ವ್ಯವಸ್ಥೆ ಪರಿಶೀಲಿಸಿ ಯಾವುದೇ ಬ್ಲಾಕೇಜ್ಆಗಿ ಸಮಸ್ಯೆ ಆಗಕೂಡದು. ವಿದ್ಯುತ್ ತಂತಿಗೆ ಆಗಿರುವ ಮರಗಿಡಗಳ ಕತ್ತರಿಸಿ. ಹಾನಿ ಆದ ಮನೆ ಅಧಿಕೃತವಾಗಿರಲಿ, ಅನಧಿಕೃತವಾಗಿರಲಿ ಮೊದಲು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಎಂಜಿನಿಯರ್ ಕುಳಿತಲ್ಲೆ ಸಹಿ ಹಾಕಬೇಡಿ. ಸ್ಥಳಕ್ಕೆ ಭೇಟಿ ನೀಡಿ ಇಲ್ಲವಾದರೆ ಸಂತ್ರಸ್ತರಿಗೆ ಸೂಕ್ತ ರೀತಿಯ ಪರಿಹಾರ ನೀಡುವಲ್ಲಿ ವ್ಯತ್ಯಾಸ ಆಗುತ್ತದೆ. ನೀವು ನೀಡುವ ಪ್ರತಿಯೊಂದು ವರದಿ ಸರ್ಕಾರಕ್ಕೆ ಹೋಗುವುದರಿಂದ ನಿಖರ ಮಾಹಿತಿ ಲಭ್ಯ ಇರುವಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.ಗ್ರೇಡ್ ೨ ತಹಶೀಲ್ದಾರ ಉಷಾ ಪಾವಸ್ಕರ್, ಸಿಪಿಐ ಸಿದ್ದರಾಮೇಶ್ವರ, ನೋಡಲ್ ಅಧಿಕಾರಿಗಳು, ತಾಲೂಕಿನ ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.