ಸಿಎಂಗೆ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಗ್ರಾಪಂ ಸದಸ್ಯ ಪೊಲೀಸರ ವಶಕ್ಕೆ

KannadaprabhaNewsNetwork | Published : Oct 17, 2024 12:07 AM

ಸಾರಾಂಶ

ಪಿಡಿಒ ಸಿ.ರುದ್ರಯ್ಯ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಪಿಡಿಒ ಆಗಿದ್ದಾಗ ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ್ದರು. ಲಂಚ ಪಡೆದು ರಾಜಕಾಲುವೆಗಳು, ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ವಿವಿಧ ಇಲಾಖೆಯ ಸರ್ಕಾರದ ಯೋಜನೆಗಳ ಅವ್ಯವಹಾರದಲ್ಲಿ ಸಿ.ರುದ್ರಯ್ಯ ಭಾಗಿಯಾಗಿದ್ದಾರೆ ಎಂಬ ಆರೋಪ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಪಂ ಪಿಡಿಒ ಸಿ.ರುದ್ರಯ್ಯ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಗ್ರಾಮ ಪಂಚಾಯ್ತಿ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದರು.

ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗಾಗಿ ಬೆಂಗಳೂರು- ಹಲಗೂರು ಮಾರ್ಗವಾಗಿ ಮುಖ್ಯಮಂತ್ರಿಗಳು ತೊರೆಕಾಡನಹಳ್ಳಿಗೆ ಆಗಸುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೆ ಮನೆಯಲ್ಲಿಯೇ ಗ್ರಾಪಂ ಸದಸ್ಯ ಕೆ.ಸುರೇಂದ್ರನನ್ನು ವಶಕ್ಕೆ ಪಡೆದುಕೊಂಡರು.

ಪಿಡಿಒ ಸಿ.ರುದ್ರಯ್ಯ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಪಿಡಿಒ ಆಗಿದ್ದಾಗ ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ್ದರು. ಲಂಚ ಪಡೆದು ರಾಜಕಾಲುವೆಗಳು, ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ವಿವಿಧ ಇಲಾಖೆಯ ಸರ್ಕಾರದ ಯೋಜನೆಗಳ ಅವ್ಯವಹಾರದಲ್ಲಿ ಸಿ.ರುದ್ರಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಸಿ.ರುದ್ರಯ್ಯ ಅವರ ಭ್ರಷ್ಟಾಚಾರ, ಅವ್ಯವಹಾರ, ಹಣ ದುರುಪಯೋಗದ ಬಗ್ಗೆ ಸಾಕ್ಷ್ಯ, ದಾಖಲೆಗಳ ಸಹಿತ ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬುಧವಾರ ಸಿಎಂ ಸಿದ್ದರಾಮಯ್ಯ ಹಲಗೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದರಿಂದ ಎಚ್ಚತ್ತ ಪೊಲೀಸರು ಗ್ರಾಪಂ ಸದಸ್ಯ ಸುರೇಂದ್ರ ಅವರನ್ನು ಬೆಳಗ್ಗೆಯೆ ವಶಕ್ಕೆ ಪಡೆದು ಮದ್ದೂರು ಠಾಣೆಗೆ ಕರೆದೊಯ್ದರು. ಪೊಲೀಸರು.ಬಂಧಿತ ಕೆ.ಸುರೇಂದ್ರ, ಪಿ.ಡಿ.ರಾಜಣ್ಣ ಬಿಡುಗಡೆ

ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿ ಪೊಲೀಸರ ವಶದಲ್ಲಿದ್ದ ಗ್ರಾಪಂ ಸದಸ್ಯ ಕೆ. ಸುರೇಂದ್ರ ಹಾಗೂ ಪುರದದೊಡ್ಡಿ ಶ್ರೀಶನೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಪಿ.ಡಿ.ರಾಜಣ್ಣ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಸಿಎಂ ಭೇಟಿ ವೇಳೆ ಕಪ್ಪುಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಅವರ ನಿವಾಸಗಳಲ್ಲಿ ಮುಂಜಾನೆ ವಶಕ್ಕೆ ತೆಗೆದುಕೊಂಡ ಪೊಲೀಸರು ಇಬ್ಬರನ್ನು 10 ಗಂಟೆ ಸುಮಾರಿಗೆ ಮದ್ದೂರು ಠಾಣೆಗೆ ಕರೆತಂದು ಇರಿಸಿದ್ದರು. ಸಂಜೆ 4.30ರ ಸುಮಾರಿಗೆ ಸುರೇಂದ್ರ ಹಾಗೂ ರಾಜಣ್ಣ ಅವರಿಂದ ಮುಚ್ಚಳಿಕೆ ಬರಸಿಕೊಂಡ ನಂತರ ಪೊಲೀಸರು ಬಿಡುಗಡೆ ಮಾಡಿದರು. ಕೆ.ಸುರೇಂದ್ರ, ಜೆಡಿಎಸ್ ಮುಖಂಡರ ಬಂಧನಕ್ಕೆ ಅನ್ನದಾನಿ ಖಂಡನೆ

ಮಳವಳ್ಳಿ:

ಹಲಗೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ರುದ್ರಯ್ಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಲು ಮುಂದಾಗಿದ್ದ ಗ್ರಾಪಂ ಸದಸ್ಯ ಕೆ.ಸುರೇಂದ್ರ ಮತ್ತು ಜೆಡಿಎಸ್ ಮುಖಂಡರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಹಲಗೂರು ಗ್ರಾಪಂನ ಅಭಿವೃದ್ಧಿ ಅಧಿಕಾರಿ ಸಿ.ರುದ್ರಯ್ಯ ಅವರ ಭ್ರಷ್ಟಾಚಾರದ ಬಗ್ಗೆ ಕೆ.ಸುರೇಂದ್ರ ಧ್ವನಿ ಎತ್ತಿ ತೊರೆಕಾಡನಹಳ್ಳಿ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟು ಪ್ರತಿಭಟನೆ ಮಾಡಲಾಗುವುದು ಎಂದಿದ್ದರು. ಆ ಹಿನ್ನೆಲೆಯಲ್ಲಿ ಕೆ.ಸುರೇಂದ್ರ ಹಾಗೂ ಪುರದದೊಡ್ಡಿಯ ಪಿ.ಡಿ.ರಾಜಣ್ಣ ಅವರನ್ನು ಬಂಧನ ಮಾಡಿ ಮದ್ದೂರು ಠಾಣೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಪಿಡಿಒ ವಿರುದ್ಧ ಧ್ವನಿ ಎತ್ತಲು ಅವಕಾಶ ನೀಡದ ತಾಲೂಕು ಆಡಳಿತ, ಪೊಲೀಸರ ನಡೆಯನ್ನು ಖಂಡಿಸುತ್ತೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದ ನಂತರದಲ್ಲಿ ಭಯದ ವಾತಾವರಣ ಸೃಷ್ಟಿಸಿ ನಿರಂತರವಾಗಿ ಜೆಡಿಎಸ್ ಮುಖಂಡರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Share this article