ಮಂಡ್ಯ ಮಂಜುನಾಥ
ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿ ನೇಮಕಗೊಂಡು ಬಂದ ನಂತರ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗ್ರಾಮ ಪಂಚಾಯ್ತಿಯ ಅಲ್ಲಲ್ಲಿ ಹೊಸ ಬದಲಾವಣೆಗಳು ಕಂಡುಬರಲಾರಂಭಿಸಿವೆ. ಪಂಚಾಯ್ತಿ ಆಡಳಿತಾಧಿಕಾರಿ ಕೆ.ಎಂ.ಲೋಕೇಶ್ ಸ್ವಚ್ಛತೆಗೆ ಹೊಸ ಮೆರುಗನ್ನು ನೀಡುತ್ತಾ ಎಲ್ಲರ ಗಮನಸೆಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ಪುಸ್ತಕದ ಗೂಡು, ಸದಾ ಕಸದ ರಾಶಿಯಿಂದ ತುಂಬಿರುತ್ತಿದ್ದ ಸ್ಥಳಗಳನ್ನು ವಿಶ್ರಾಂತಿಯ ತಾಣವಾಗಿ ಪರಿವರ್ತನೆ, ಗಿಡಗಳನ್ನು ನೆಟ್ಟು ಹಸಿರೀಕರಣ, ಬಸ್ ನಿಲ್ದಾಣಕ್ಕೆ ಹೊಸತನದ ಸ್ಪರ್ಶ ನೀಡಿ ಎಲ್ಲವನ್ನೂ ಆಕರ್ಷಣೆಯ ಸ್ಥಳಗಳನ್ನಾಗಿ ರೂಪಾಂತರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕೆ.ಎಂ.ಲೋಕೇಶ್ ಅವರು ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ನಂತರ ಪಂಚಾಯ್ತಿಯೊಳಗೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲು ಆರಂಭಿಸಿದರು. ಕಸ ಬೀಳುತ್ತಿದ್ದ ಸ್ಥಳಗಳಲ್ಲಿ ಸೀಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಮೇಲೆ ಹದ್ದಿನ ಕಣ್ಣಿಟ್ಟರು. ಕಸ ಹಾಕಿದವರಿಗೆ ದಂಡ ಪ್ರಯೋಗ ಮಾಡುವ ಎಚ್ಚರಿಕೆ ನೀಡಿದರು. ನಂತರ ಆ ಸ್ಥಳಗಳಲ್ಲಿ ಕಸ ಬೀಳುವುದು ನಿಂತಿತು.
ಅವ್ಯವಸ್ಥಿತ ರೀತಿಯಲ್ಲಿದ್ದ ಕ್ಯಾತುಂಗೆರೆ ಬಸ್ ನಿಲ್ದಾಣಕ್ಕೆ ಹೊಸದಾಗಿ ಬಣ್ಣ ಹೊಡೆಸಿದರು. ನಿಲ್ದಾಣದೊಳಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಓದಲು ಅನುಕೂಲವಾಗುವಂತೆ ಪ್ರತ್ಯೇಕ ರಾಕ್‌ನಲ್ಲಿ ದಿನಪತ್ರಿಕೆಗಳು ಹಾಗೂ ಕಬ್ಬಿಣದ ಬೀರುವಿನಲ್ಲಿ ಪುಸ್ತಕಗಳನ್ನಿಟ್ಟು ಓದುವ ಸಂಸ್ಕೃತಿಯನ್ನು ಬೆಳೆಸುವುದಕ್ಕೆ ನಾಂದಿ ಹಾಡಿದ್ದಾರೆ. ಜಗತ್ತನ್ನು ಬೆಳಗಿಸಲು ಒಬ್ಬ ಸೂರ್ಯ ಸಾಕು, ಬದುಕನ್ನು ಬೆಳಗಿಸಲು ಒಂದು ಪುಸ್ತಕ ಸಾಕು ಎಂಬ ಘೋಷವಾಕ್ಯದೊಂದಿಗೆ ಪುಸ್ತಕದ ಮಹತ್ವವನ್ನು ಸಾರಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯೊಳಗೆ ಸ್ವಚ್ಛತೆ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಕೆ.ಎಂ.ಲೋಕೇಶ್ ವಿಭಿನ್ನ ಪ್ರಯೋಗಗಳೊಂದಿಗೆ ಸ್ವಚ್ಛತೆಯಲ್ಲಿ ಕ್ರಾಂತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪಂಚಾಯ್ತಿಯೊಳಗೆ ಹೊಸ ಬದಲಾವಣೆಯನ್ನು ತರುವ ಸಂಕಲ್ಪದೊಂದಿಗೆ ಹೊಸತನವನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಇದಕ್ಕೆ ಜನರೂ ಸಹ ಕೈಜೋಡಿಸಿ ಸ್ವಚ್ಛತೆ ಕಾಪಾಡುವುದಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ.
- ಕೆ.ಎಂ.ಲೋಕೇಶ್, ಆಡಳಿತಾಧಿಕಾರಿ, ಬೇವಿನಹಳ್ಳಿ ಗ್ರಾಪಂ