ಕಾರ್ಮಿಕರ ಮಕ್ಕಳ ಆರೈಕೆಗೆ ಕೂಸಿನ ಮನೆ

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಕೂಲಿ ಕಾರ್ಮಿಕ ಮಕ್ಕಳ ಲಾಲನೆ-ಪಾಲನೆಗಾಗಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿಯ ಕೂಸಿನ ಮನೆ (ಶಿಶುಪಾಲನಾ ಕೇಂದ್ರ)ಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದ್ದು ಅದರಂತೆ ಅಂಗನವಾಡಿ ಮಾದರಿಯಂತಿರುವ ಈ ಕೇಂದ್ರಗಳ ಆರಂಭಕ್ಕೆ ಹುಕ್ಕೇರಿ ತಾಲೂಕಿನಲ್ಲಿ ಭರದ ಸಿದ್ಧತೆಗಳು ನಡೆದಿವೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕೂಲಿ ಕಾರ್ಮಿಕ ಮಕ್ಕಳ ಲಾಲನೆ-ಪಾಲನೆಗಾಗಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿಯ ಕೂಸಿನ ಮನೆ (ಶಿಶುಪಾಲನಾ ಕೇಂದ್ರ)ಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದ್ದು ಅದರಂತೆ ಅಂಗನವಾಡಿ ಮಾದರಿಯಂತಿರುವ ಈ ಕೇಂದ್ರಗಳ ಆರಂಭಕ್ಕೆ ಹುಕ್ಕೇರಿ ತಾಲೂಕಿನಲ್ಲಿ ಭರದ ಸಿದ್ಧತೆಗಳು ನಡೆದಿವೆ.

ತಾಲೂಕಿನ 52 ಗ್ರಾಮ ಪಂಚಾಯಿತಿ ಪೈಕಿ ಮೊದಲ ಹಂತದಲ್ಲಿ 33 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ಸ್ಥಾಪಿಸಲಾಗಿದೆ. ಅವು ಈಗ ಮಕ್ಕಳ ಪೋಷಣೆ, ಸುರಕ್ಷತೆ, ಆರೈಕೆಗೆ ಸಿದ್ಧಗೊಂಡಿವೆ. ಕೆಲಸದ ಅವಧಿಯಲ್ಲಿ ನರೇಗಾ ಕಾರ್ಮಿಕರ ಮಕ್ಕಳ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೀಘ್ರವೇ ಆರಂಭಗೊಳ್ಳಲಿವೆ.

ಕೂಸಿನ ಮನೆ ಎಂಬ ಶಿಶುಪಾಲನಾ ಕೇಂದ್ರಗಳನ್ನು ಹುಲ್ಲೋಳಿ, ಕೊಟಬಾಗಿ, ಸಾರಾಪುರ, ನಿಡಸೋಸಿ, ದಡ್ಡಿ, ಸಲಾಮವಾಡಿ, ನೇರಲಿ, ಕುರಣಿ, ಬೆಲ್ಲದ ಬಾಗೇವಾಡಿ, ಬೆಳವಿ, ಸೊಲ್ಲಾಪುರ ಸೇರಿದಂತೆ 33 ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಈಗಾಗಲೇ ಪ್ರಾಯೋಗಿಕವಾಗಿ ಹಂಚಿನಾಳ, ಹತ್ತರಗಿ, ಶಿಂಧಿಹಟ್ಟಿಯಲ್ಲಿ ಆರಂಭಿಸಲಾದ ಕೂಸಿನಮನೆಗಳು ಇಡೀ ಜಿಲ್ಲೆಗೆ ಮಾದರಿಯಾಗಿವೆ.

ಈ ಮಾದರಿ ಕೇಂದ್ರಗಳಿಗೆ ಜಿಲ್ಲೆ ಮತ್ತು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮಕ್ಕಳ ಅಪೌಷ್ಟಿಕ ಮತ್ತು ಶಿಶುಮರಣ ತಡೆಯಲು ರಾಜ್ಯ ಸರ್ಕಾರ ಇಟ್ಟಿರುವ ಮಹತ್ವದ ಹೆಜ್ಜೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಉದ್ಯೋಗ ಖಾತರಿಯಲ್ಲಿ ಗ್ರಾಮೀಣಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಒಂದಿಲ್ಲೊಂದು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಲೇ ಇದ್ದು ಇದೀಗ ಶಿಶುಪಾಲನಾ ಕೇಂದ್ರ ಹೊಸ ಸೇರ್ಪಡೆಯಾಗಿದೆ. ಇದು ಮಗುವಿನ ಬೆಳವಣಿಗೆಗೆ ಉತ್ತಮ ವಾತಾವರಣ ರೂಪಿಸಲಿದ್ದು ಕೂಲಿ ಕಾರ್ಮಿಕರ ಮಕ್ಕಳ ಆರೈಕೆಯಾಗಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಾರಿಯಾಗುತ್ತಿರುವ ಈ ಯೋಜನೆಗೆ ಸರ್ಕಾರಿ ಕಟ್ಟಡ ಇಲ್ಲವೇ ಗ್ರಾಮ ಪಂಚಾಯಿತಿ ಕಟ್ಟಡಗಳನ್ನು ಗುರುತಿಸಲಾಗಿದೆ.

ಪ್ರತಿ ಕೇಂದ್ರ ಸ್ಥಾಪನೆಗೆ ₹1 ಲಕ್ಷ ಅನುದಾನ ಮಂಜೂರಾಗಿದೆ. ಇನ್ನೂ ಅಗತ್ಯವಿದ್ದರೆ ಗ್ರಾಪಂ 15ನೇ ಹಣಕಾಸು, ಜಿಪಂ-ತಾಪಂ ಅನುದಾನ ಬಳಸಬಹುದು. ನರೇಗಾ ಮಹಿಳಾ ಕಾರ್ಮಿಕರೇ ಈ ಮಕ್ಕಳ ಪೋಷಣೆಯ ಹೊಣೆ ನಿರ್ವಹಿಸಲಿದ್ದಾರೆ. ಜಾಬ್ ಕಾರ್ಡ್ ಹೊಂದಿರುವ ಕನಿಷ್ಠ 10ನೇ ತರಗತಿ ಓದಿರುವ ಕೂಲಿಕಾರ್ಮಿಕರರನ್ನು ಆರೈಕೆದಾರ(ಕೇರ್ ಟೇಕರ್ಸ್‌)ರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮಕ್ಕಳ ಪ್ರಾರಂಭಿಕ ಬಾಲ್ಯದ ಬೆಳವಣಿಗೆಗೆ ಪೌಷ್ಠಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಸಿರಿಧಾನ್ಯಗಳಿಂದ ತಯಾರಿಸಿದ ಗಂಜಿ, ಹಾಲು ಮೊಟ್ಟೆ ಜೊತೆಗೆ ಉಪಹಾರ, ಮಧ್ಯಾಹ್ನ ಬಿಸಿಯೂಟ, ಸಂಜೆ ಲಘು ಉಪಹಾರ ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೌಷ್ಠಿಕ ಆಹಾರ ವಿತರಣೆಯಾಗಲಿದೆ.

ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧ, ಶುದ್ಧ ನೀರು, ಮಕ್ಕಳ ಆಟಿಕೆ ವಸ್ತು, ಮಕ್ಕಳ ಸ್ನೇಹಿ ಶೌಚಾಲಯ, ವಿಶೇಷಚೇತನ ಮಕ್ಕಳಿಗೆ ಇಳಿಜಾರು ಮತ್ತು ಕೈ ಹಳಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ತಿಳಿಸಿದ್ದಾರೆ.ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರ ಶಿಶುಗಳ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರ ತನ್ನ ಮಡಿಲಿಗೆ ಹಾಕಿಕೊಳ್ಳುವ ವಿಶಿಷ್ಟ ಯೋಜನೆ ಇದಾಗಿದೆ. ಮಕ್ಕಳ ಬೆಳವಣಿಗೆ ಉತ್ತೇಜಿಸಲು ಈ ಕೇಂದ್ರಗಳು ವರದಾನವಾಗಲಿವೆ. ಹುಕ್ಕೇರಿ ತಾಲೂಕಲ್ಲಿ ಈ ಯೋಜನೆ ಆರಂಭಕ್ಕೆ ಸಮರೋಪಾದಿ ತಯಾರಿ ನಡೆದಿದೆ. -ಪಿ.ಲಕ್ಷ್ಮೀನಾರಾಯಣ, ನರೇಗಾ ಸಹಾಯಕ ನಿರ್ದೇಶಕರು.

Share this article