ಕೂಡ್ಲಿಗಿಯನ್ನು ಸುಂದರ ನಗರವಾಗಿಸಲು ಯೋಜನೆ

KannadaprabhaNewsNetwork | Published : Sep 10, 2024 1:37 AM

ಸಾರಾಂಶ

ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹೆಸರನ್ನು ಅಳಿಸಿ, ಪಟ್ಟಣದಲ್ಲಿ ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು, ಸ್ವಚ್ಛತೆ.

ಕೂಡ್ಲಿಗಿ: ಕೂಡ್ಲಿಗಿಯನ್ನು ಸುಂದರ ಹಾಗೂ ಸ್ವಚ್ಛ ನಗರವಾಗಿಸಲು ಒತ್ತು ನೀಡಲಾಗಿದ್ದು, ಈಗಾಗಲೇ ರಾಜಕಾಲುವೆ, ಮುಳ್ಳುಕಂಟಿ ಗಿಡಗಳ ಸ್ವಚ್ಛತೆ ಜತೆಗೆ ಹತ್ತು ಹಲವು ಕಾಮಗಾರಿಗಳು ನಡೆದಿವೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.

ಅವರು ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಗೆ ಪಾದಚಾರಿ ಮಾರ್ಗದ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಹೆಸರನ್ನು ಅಳಿಸಿ, ಪಟ್ಟಣದಲ್ಲಿ ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪಗಳ ಮೂಲಸೌಕರ್ಯವನ್ನು ಅಚ್ಚುಕಟ್ಟಾಗಿ ಕಲ್ಪಿಸುವ ಮೂಲಕ ಸುಂದರ ನಗರವಾಗಿಸಲು ಹಂತ ಹಂತವಾಗಿ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ನನ್ನ ತಂದೆಯವರಾದ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಅಧಿಕಾರವಧಿಯಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕೊಠಡಿಗಳು ಇಂದು ಕೆಲವು ಹಾಳಾಗಿವೆ. ಹೀಗಾಗಿ ನನ್ನ ಅವಧಿಯಲ್ಲಿ ಮೂಲಸೌಕರ್ಯಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಟ್ಟಣದ ಅಭಿವೃದ್ಧಿ ಜತೆಗೆ ಪದವಿ ಕಾಲೇಜನ್ನು ಸುಸಜ್ಜಿತಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, ಕೂಡ್ಲಿಗಿ ಪಟ್ಟಣಕ್ಕೆ ಪಾವಗಡ ಮಾರ್ಗದ ಮೂಲಕ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಹರಸಾಹಸ ಪಟ್ಟಿದ್ದರಿಂದ ಅದು ಸಾಧ್ಯವಾಗಿದೆ. ಅಲ್ಲದೆ, ಪಟ್ಟಣದಲ್ಲಿ ಹತ್ತಾರು ವರ್ಷಗಳಿಂದ ರಾಜಕಾಲುವೆ ಸ್ವಚ್ಛತೆಯಾಗಿರಲಿಲ್ಲ. ಆದರೆ, ಶಾಸಕರ ಮುತುವರ್ಜಿ ಮತ್ತು ಕಾಳಜಿಯಿಂದ ಅದು ಸಾಧ್ಯವಾಗಿದೆ ಎಂದು ಹೇಳಿದರು.

ಪಪಂ ಉಪಾಧ್ಯಕ್ಷೆ ಕೆ. ಲೀಲಾವತಿ ಪ್ರಭಾಕರ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು, ಪ.ಪಂ. ಸದಸ್ಯರಾದ ತಳಾಸ್ ವೆಂಕಟೇಶ್, ಕೆ. ಈಶಪ್ಪ, ಪೂರ‍್ಯಾನಾಯ್ಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಕಾಂಗ್ರೆಸ್ ಹಿರಿಯ ಮುಖಂಡರಾದ ನರಸಿಂಹನಗಿರಿ ವೆಂಕಟೇಶ್, ಡಾಣಿ ರಾಘವೇಂದ್ರ, ಜಯಮ್ಮರ ರಾಘವೇಂದ್ರ, ಕೊತ್ಲಪ್ಪ, ಹಡಗಲಿ ವೀರಭದ್ರಪ್ಪ ಮುಂತಾದವರು ಹಾಜರಿದ್ದರು.

Share this article