ಮಕ್ಕಳಲ್ಲಿನ ಸುಪ್ತ ಪ್ರತಿಭೆ, ಜ್ಞಾನ ಅನಾವರಣಕ್ಕೆ ವೇದಿಕೆ ಅತ್ಯವಶ್ಯಕ: ಡಾ.ರಾಮಕೃಷ್ಣೇಗೌಡ

KannadaprabhaNewsNetwork |  
Published : Sep 08, 2025, 01:00 AM IST
7ಕೆಎಂಎನ್ ಡಿ18 | Kannada Prabha

ಸಾರಾಂಶ

ಶಾಲಾ ಮಕ್ಕಳಿಗೆ ಇಂತಹ ವೇದಿಕೆ ಕಲ್ಪಿಸುವುದರಿಂದ ಮುಂದಿನ ದಿನಗಳಲ್ಲಿ ಅವರು ವ್ಯವಸ್ಥಿತ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ದೊಡ್ಡವರಿಗೆ ಮೀಸಲಾಗಿರುವ ಇಂತಹ ಹರಟೆ ಕಾರ್ಯಕ್ರಮಗಳನ್ನು ಶಾಲಾ ಹಂತಕ್ಕೂ ಕೊಂಡೊಯ್ದು ಮಕ್ಕಳಿಂದಲೇ ಕಾರ್ಯಕ್ರಮ ಮಾಡಿಸದರೆ ಮಕ್ಕಳಲ್ಲಿರುವ ಪ್ರತಿಭೆ, ಪ್ರೌಢಿಮೆ ಅನಾವರಣವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಮತ್ತು ಜ್ಞಾನ ಅನಾವರಣಗೊಳ್ಳಲು ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮದಂತಹ ವೇದಿಕೆ ಅತ್ಯವಶ್ಯಕ ಎಂದು ಆದಿಚುಂಚನಗಿರಿ ಹೇಮಗಿರಿ ಮತ್ತು ಧಾರವಾಡ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಜಿ.ಬೊಮ್ಮನಹಳ್ಳಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶ್ರೀವಿಶ್ವೇಶ್ವರಯ್ಯ ಗ್ರಾಮಾಂತರ ಪೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳಿಂದ ತಂದೆ ತಾಯಂದಿರಿಗೆ ಪಾದ ಪೂಜೆ ಮತ್ತು ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ ಮಕ್ಕಳಿಗೆ ಇಂತಹ ವೇದಿಕೆ ಕಲ್ಪಿಸುವುದರಿಂದ ಮುಂದಿನ ದಿನಗಳಲ್ಲಿ ಅವರು ವ್ಯವಸ್ಥಿತ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ದೊಡ್ಡವರಿಗೆ ಮೀಸಲಾಗಿರುವ ಇಂತಹ ಹರಟೆ ಕಾರ್ಯಕ್ರಮಗಳನ್ನು ಶಾಲಾ ಹಂತಕ್ಕೂ ಕೊಂಡೊಯ್ದು ಮಕ್ಕಳಿಂದಲೇ ಕಾರ್ಯಕ್ರಮ ಮಾಡಿಸದರೆ ಮಕ್ಕಳಲ್ಲಿರುವ ಪ್ರತಿಭೆ, ಪ್ರೌಢಿಮೆ ಅನಾವರಣವಾಗುತ್ತದೆ ಎಂದರು.

ಹೇಮಗಿರಿ ಶಾಖಾ ಮಟ್ಟಕ್ಕೆ ಒಳಪಡುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ಎಂಟು ವರ್ಷಗಳ ಪ್ರಯತ್ನದಿಂದಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆ ಕಲಿತ ಮಕ್ಕಳ ಬಗ್ಗೆ ರಾಜ್ಯದ ಹಲವು ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದರು.

ಶಾಲೆ ಸಂಸ್ಥಾಪಕ ಸದಸ್ಯ ಡಿ.ಕೆ.ಕೋದಂಡರಾಮು ಮಾತನಾಡಿ, ಈ ಶಾಲೆಯನ್ನು ಕಾರಣಾಂತರದಿಂದ ಮುಚ್ಚುವ ಹಂತಕ್ಕೆ ಬಂದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆದಿಚುಂಚನಗರಿ ಮಠಕ್ಕೆ ವಹಿಸಲಾಯಿತು. ಅಂದಿನಿಂದ ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ ಎಂದರು.

ಶಾಲೆಗೆ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವೂ ಸಿಗುತ್ತಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮ, ಸಂಸ್ಕೃತಿ ಸಂಸ್ಕಾರ ಕಲಿಸಲು ಗ್ರಾಮದಲ್ಲಿ ಒಂದು ಶಾಖಾ ಮಠ ತೆರೆಯುವ ಅಗತ್ಯವಿದೆ ಎಂದರು.

ಹಿರಿಯ ಪತ್ರಕರ್ತ ಪಿ.ಜೆ.ಜಯರಾಂ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಧೈರ್ಯ, ಶಕ್ತಿ ಮತ್ತು ಆತ್ಮಸ್ಥೈರ್ಯ ತುಂಬಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ಚಿತ್ರ ನಿರ್ದೇಶಕಿ ಮತ್ತು ಖ್ಯಾತ ವಾಗ್ಮಿ ರೂಪಾ ಅಯ್ಯರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ, ಸಂಬಂಧಗಳ ಬಗ್ಗೆ ಅರಿವು ಮೂಡಿಸಿ ತಂದೆ ತಾಯಂದಿರ ಮಹತ್ವ ಕುರಿತು ತಿಳುವಳಿಕೆ ಮೂಡಿಸಲು ವಿದ್ಯಾರ್ಥಿಗಳಿಂದಲೇ ತಂದೆ ತಾಯಿಯ ಪಾದಪೂಜೆ ಮಾಡಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ವಾಗ್ಮಿ ರೂಪಾ ಅಯ್ಯರ್ ಸಾರಥ್ಯದಲ್ಲಿ ಹೆಚ್ಚು ಸುಳ್ಳು ಹೇಳುವವರು ಗಂಡಸರೋ-ಹೆಂಗಸರೋ ವಿಷಯ ಕುರಿತಂತೆ ವಾದ ಪ್ರತಿವಾದ ನಡೆಸಿದ 8 ಮಂದಿ ವಿದ್ಯಾರ್ಥಿಗಳು ತಮ್ಮ ವಾಕ್ಚಾತುರ್ಯದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಟ್ಟು ನೀರೆರೆದ ಗಣ್ಯರನ್ನು ವಿದ್ಯಾರ್ಥಿಗಳು ಪೂರ್ಣಕುಂಭ, ಕೋಲಾಟ ಮತ್ತು ಜಾನಪದ ನೃತ್ಯದ ಸ್ವಾಗತ ಕೋರಿ ವೇದಿಕೆಗೆ ಬರಮಾಡಿಕೊಂಡರು.

ಮುಖ್ಯಶಿಕ್ಷಕ ಎಂ.ಸಿ.ಮಂಜುನಾಥ್, ಶಿಕ್ಷಕರಾದ ನಳಿನ, ಬಸವರಾಜು, ಮಂಜುನಾಥ್, ಸತೀಶ್, ಸುರೇಶ್, ಧರಣೇಂದ್ರಕುಮಾರ್, ಜಯಶೀಲ, ನಿತೀಶ್ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌