ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಜನರ ಸಮಸ್ಯೆ ಅರ್ಥ ಮಾಡಿಕೊಂಡು ಕಾಲಕಾಲಕ್ಕೆ ಅವುಗಳನ್ನು ಪರಿಹಾರ ಮಾಡುವುದೇ ನಿಜವಾದ ರಾಜಕಾರಣಿಯ ಕೆಲಸವಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದಾಗ ಮಾತ್ರ ರಾಜಕಾರಣಿ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಶಾಸಕರ ಸಭಾಭವನದಲ್ಲಿ ತಮ್ಮ ಜನ್ಮ ದಿನಾಚರಣೆ ನಿಮಿತ್ತ ಗಂಗಮ್ಮ ಬೊಮ್ಮಾಯಿ ಟ್ರಸ್ಟ್, ಬೊಮ್ಮಾಯಿ ಅಭಿಮಾನಿಗಳ ಬಳಗ ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರ, ತಾಲೂಕು ಅರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣ ಕೇವಲ ಚುನಾವಣೆ ಅಥವಾ ಅಧಿಕಾರಕ್ಕಾಗಿ ಸೀಮಿತಗೊಳ್ಳಬಾರದು. ಜನಸೇವೆ ಎಂದು ಯಾರು ರಾಜಕಾರಣ ಮಾಡುತ್ತಾರೆ ಅಂತಹ ರಾಜಕಾರಣಿ ಶಾಶ್ವತವಾಗಿ ಜನರ ಮನಸ್ಸಿನಲ್ಲಿರಲು ಸಾಧ್ಯ ಎಂದರು.ಮುಂಬರುವ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಸೇರಿದಂತೆ ಹಲವು ರೀತಿಯ ಆರೋಗ್ಯ ತಪಾಸಣೆಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಡವರಿಗೆ ಆಶ್ರಯವಾಗುವ ಕೆಲಸ ಮಾಡಲಾಗುವುದು ಎಂದರು.
ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ೨೦೦ ಬೆಡ್‌ಗಳಿಗೆ ಹೆಚ್ಚಿಸುವ ಮೂಲಕ ಮೇಲ್ದರ್ಜೆಗೇರಿಸಲಾಗಿದೆ. ಕ್ಷೇತ್ರದ ಜನತೆಗೆ ಯಾವುದೇ ರೀತಿಯ ವೈದ್ಯಕೀಯ ಕೊರತೆಯಾಗದಂತೆ ಎಲ್ಲ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಕಾಮಗಾರಿಯು ಪ್ರಾರಂಭವಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆ ಕೆಲಸವನ್ನು ಮುಗಿಸಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದು. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆಯ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ರಕ್ತದಾನ ಶಿಬಿರ ನಡೆಸುವ ಮೂಲಕ ರಕ್ತದ ಕೊರತೆಯನ್ನು ನಿವಾರಿಸುವ ಕೆಲಸ ಮಾಡಲಾಗುವುದು ಎಂದರು.ಲೀಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಮಂಜುನಾಥ ಬ್ಯಾಹಟ್ಟಿ, ಹನುಮರಡ್ಡಿ ನಡುವಿನಮನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತ್ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣನವರ, ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣನವರ, ಶಿವಪ್ರಸಾದ್ ಸುರಗಿಮಠ, ಬಸನಗೌಡ ಇನಾಮತಿ, ಶ್ರೀಕಾಂತ ಬುಳ್ಳಕ್ಕನವರ, ಸುಭಾಸ ಚವ್ಹಾಣ, ಜಾಪರಖಾನ ಪಠಾಣ, ದೇವಣ್ಣ ಚಾಕಲಾಬ್ಬಿ, ರವಿ ಕುಡಒಕ್ಕಲಿಗರ, ಟಿ.ವಿ. ಸುರಗಿಮಠ, ಎಂ.ಎನ್. ವೆಂಕೋಜಿ, ರಮೇಶ ವನಹಳ್ಳಿ, ಪರಶುರಾಮ ಸೊನ್ನದ, ವಿರೇಶ ಆಜೂರ, ಕರೆಪ್ಪ ಕಟ್ಟಿಮನಿ, ಮಲ್ಲೇಪ್ಪ ಹರಿಜನ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮೀಕಿ, ತಾಲೂಕು ಅರೋಗ್ಯಾಧಿಕಾರಿ ಡಾ. ಸತೀಶ್ ಎ.ಆರ್., ಆಡಳಿತಾಧಿಕಾರಿ ಡಾ. ಹನುಮಂತಪ್ಪ ಪಿ.ಎಚ್. ಸೇರಿದಂತೆ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬೊಮ್ಮಾಯಿ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿದ್ದರು.