ಕನ್ನಡಪ್ರಭ ವಾರ್ತೆ ಮಳವಳ್ಳಿ
ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಪಿ.ನಾಗೇಶ್ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಅವರ ರಾಜಕೀಯ ಜೀವನ ಸುಗಮವಾಗಲಿ. ಅಡೆತಡೆಗಳು ದೂರವಾಗಿ ಶೀಘ್ರ ಮುಖ್ಯಮಂತ್ರಿಯಾಗಲಿ ಎಂದು ಘೋಷಣೆ ಕೂಗಿದರು. ನಂತರ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಪ್ರಾರ್ಥಿಸಿದರು.
ಬಿ.ಎಂ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಪಕ್ಕಕ್ಕಾಗಿ 40 ವರ್ಷ ದುಡಿದಿದ್ದಾರೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಅವರ ದುಡಿಮೆಗಾಗಿ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿ ಎಂದು ಒತ್ತಾಯಿಸಿದರು.ವಿ.ಪಿ.ನಾಗೇಶ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ದುಡಿದಿದ್ದಾರೆ. ಹಲವು ಸಂಕಷ್ಟಗಳನ್ನು ಎದುರಿಸಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಈಗಾಗಲೇ ಏಳೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಸಹಕಾರ ನೀಡಲಿ ಎಂದರು.
ಮೇಕೆದಾಟು ಯೋಜನೆಗಾಗಿ ಕನಸು ಕಂಡು ಹೋರಾಟ ಮಾಡಿದ್ದಾರೆ. ಬೆಂಗಳೂರಿನ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಮೇಕೆದಾಟು ಯೋಜನೆ ಅವಶ್ಯಕತೆ ಇದೆ. ಶೀಘ್ರವೇ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಮನವಿ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಮಾತನಾಡಿ, ಕಾಂಗ್ರೆಸ್ ನಲ್ಲಿ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗ ಸಮುದಾಯದ ಯಾವೊಬ್ಬ ನಾಯಕರೂ ಮುಖ್ಯಮಂತ್ರಿಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದೆಲ್ಲೆಡೆ ಕಾಂಗ್ರೆಸ್ ಅನ್ನು ಬಲಪಡಿಸಿ ಅಧಿಕಾರಕ್ಕೆ ತಂದಿದ್ದಾರೆ. ಹಳೆ ಮೈಸೂರು ಭಾಗದ ಒಕ್ಕಲಿಗ ಸಮುದಾಯವು ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಅಪ್ಪಾಜಿಗೌಡ ಮಾತನಾಡಿ, ನಾವು ಒಕ್ಕಲಿಗರಾಗಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಶ್ರಮ ಸಾಕಷ್ಟಿದೆ. ಅವರಿಗೆ ಅಲ್ಲಿ ಅವಕಾಶ ಸಿಗದಿದ್ದರೆ ಬಿಜೆಪಿಗೆ ಬರಲಿ, ನಾವು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಎಂ.ಬಿ.ಮಲ್ಲಯ್ಯ ಅವರು ಅನ್ನಸಂತರ್ಪಣೆ ಆಯೋಜಿಸಿದ್ದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಂದರ್ ರಾಜು, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಎಂ.ಬಿ.ಮಲ್ಲಯ್ಯ, ಶಿವಮಾದೇಗೌಡ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಶ್ರೀಕಾಂತ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಕೆ.ಎಸ್.ದ್ಯಾಪೇಗೌಡ, ಟಿ.ಸಿ.ಚೌಡಯ್ಯ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಜಯಮ್ಮ, ಮುಖಂಡರಾದ ವೆಂಕಟೇಗೌಡ, ಶಿವಮಾದೇಗೌಡ, ರಮೇಶ್, ಸುಂದರೇಶ್, ಬಸವರಾಜು, ದೊಡ್ಡಸ್ವಾಮಿಗೌಡ ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.