ಕಸಾಪದ ಶಾಲೆಗೊಂದು ಕಾರ್ಯಕ್ರಮ ಹೆಮ್ಮೆಯ ಸಂಗತಿ: ಹರಿಚರಣತಿಲಕ್

KannadaprabhaNewsNetwork |  
Published : Nov 06, 2024, 12:55 AM IST
5ಕೆಎಂಎನ್ ಡಿ21 | Kannada Prabha

ಸಾರಾಂಶ

ಕನ್ನಡಿಗರಿಗೆ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಈ ನೆಲದಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಬಗ್ಗೆ ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲೆಗೊಂದು ಕಾರ್ಯಕ್ರಮವನ್ನು ಕಳೆದ 36 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್ ಹೇಳಿದರು.

ತಾಲೂಕಿನ ಗವಿಮಠ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಸಾಪದಿಂದ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. 30 ವರ್ಷಗಳ ನಂತರ ಮಂಡ್ಯದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ವೇಳೆಯೇ ಈ ಅಭಿಮಾನದ ಆಯೋಜನೆ ಅರ್ಥಪೂರ್ಣವಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೇಮ ಹಾಗೂ ನಮ್ಮ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ತುಂಬುವ ಕೆಲಸವನ್ನು ತಾಲೂಕು ಕಸಾಪ ಬದ್ಧತೆಯಿಂದ ಮಾಡುತ್ತಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಸಿ.ಎನ್. ಯತೀಶ್ ಮಾತನಾಡಿ, ತಾಯಿ ಭಾಷೆ ಕನ್ನಡದಲ್ಲೇ ಮಾತನಾಡಿದರೆ ನಮ್ಮ ಮನಸಿನ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು, ಸಂವಹನ ಮಾಡಲು ಸಾಧ್ಯವಿದೆ ಎಂದರು.

ಆಂಗ್ಲ ಭಾಷೆಯನ್ನು ಕೇವಲ ಒಂದು ಸಂವಹನ ಭಾಷೆಯಾಗಿ ಕಲಿಯಬೇಕು. ಕನ್ನಡವನ್ನು ಪ್ರೀತಿಸಿ ಆರಾಧಿಸಬೇಕು. ನಮ್ಮ ನೆಲದ ಭಾಷೆ ಕನ್ನಡದಲ್ಲಿಯೇ ವ್ಯವಹರಿಸಿ ಸರ್ವ ಶ್ರೇಷ್ಠ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಶಾಲೆ ಪ್ರಾಂಶುಪಾಲ ಕೆ.ಎಂ.ಕುಪ್ಪಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಕನ್ನಡಿಗರಿಗೆ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಈ ನೆಲದಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷರಾದ ಕೆ. ಕಾಳೇಗೌಡ, ಕೆ.ಆರ್.ನೀಲಕಂಠ, ಉಪಾಧ್ಯಕ್ಷೆ ಸವಿತಾ ರಮೇಶ್, ಶಿಕ್ಷಕ ರವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು ಮಾತನಾಡಿದರು. ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಎಸ್ಸಿ,ಎಸ್ಟಿ ನೌಕರರ ಸಂಘದ ಅಧ್ಯಕ್ಷ ಯೋಗೇಶ್, ಗೌರವ ಕಾರ್ಯದರ್ಶಿ ಚನ್ನೇಗೌಡ, ಕಟ್ಟೆ ಮಹೇಶ್, ಕೋಶಾಧ್ಯಕ್ಷ ಮಂಜೇಗೌಡ, ಪಿ. ಬಿ. ನಾಗರಾಜು, ಶಿಕ್ಷಕ ರವಿ, ಸೈಯ್ಯದ್ ಖಲೀಲ್ ಸೇರಿ ಹಲವರು ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌