ನೂತನ ಸಂಸದರಿಗೆ ಶೀಘ್ರ ಅಭಿನಂದನಾ ಸಮಾರಂಭ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ನಿಶಾಂತ್

KannadaprabhaNewsNetwork | Published : Jun 8, 2024 12:30 AM

ಸಾರಾಂಶ

ನೂತನ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಹಾಗೂ ಅವರ ಗೆಲುವಿಗೆ ಕಾರಣರಾದ ಸಮಸ್ತ ತಾಲೂಕಿನ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ನಿಶಾಂತ್ ಹೇಳಿದರು. ಬೇಲೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ । ಎಂಪಿಯಾಗಿ ಆಯ್ಕೆಯಾಗಿರುವ ಶ್ರೇಯಸ್‌ ಪಟೇಲ್‌ಗೆ ಸನ್ಮಾನಿಸಲು ಬ್ಲಾಕ್‌ ಕಾಂಗ್ರೆಸ್‌ ತೀರ್ಮಾನ । ಮತದಾರರಿಗೂ ಧನ್ಯವಾದ

ಕನ್ನಡಪ್ರಭ ವಾರ್ತೆ ಬೇಲೂರು

ನೂತನ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಹಾಗೂ ಅವರ ಗೆಲುವಿಗೆ ಕಾರಣರಾದ ಸಮಸ್ತ ತಾಲೂಕಿನ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ನಿಶಾಂತ್ ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ಕುಟುಂಬದ ದುರಾಡಳಿತ ಅಂತ್ಯವಾಗಿದ್ದು, ಸಜ್ಜನ ರಾಜಕಾರಣಿ ಹಾಗೂ ಸುಸಂಸ್ಕೃತ ಕುಟುಂಬದ ಶ್ರೇಯಸ್ ಪಟೇಲ್ ಅವರ ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರ ಹಾಗೂ ಎಲ್ಲಾ ಮತದಾರ ಪ್ರಭುಗಳ ಪರವಾಗಿ ಅಭಿನಂದನಾ ಸಮಾರಂಭವನ್ನು ಹಿರಿಯರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುವುದು. ತಾಲೂಕಿನಲ್ಲಿ ಮೈತ್ರಿ ಪಕ್ಷಗಳ ಮಾಜಿ ಹಾಗು ಹಾಲಿ ಎಂಎಲ್‌ಎಗಳು ಈ ಬಾರಿ ೧ ಲಕ್ಷ ಮತಗಳನ್ನು ಅಭ್ಯರ್ಥಿಗೆ ನೀಡುತ್ತೇವೆಂದು ಹೇಳಿದ್ದರು. ಕೇವಲ ೧೬೨೦ ಮತಗಳು ಮಾತ್ರ ಮುನ್ನಡೆಯಾಗಿದ್ದು ಅವರಿಗೆ ತಲೆತಗ್ಗಿಸುವ ಕೆಲಸ ಆಗಿದೆ. ಕಳೆದ. ವಿಧಾನಸಭೆ ಚುನಾವಣೆಗಿಂತ ಹೆಚ್ಚು ಮತ ಪಡೆದಿದ್ದೇವೆ. ಇಲ್ಲಿ ೨ ಪಕ್ಷಗಳಿಗಿಂತಲೂ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದು ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದು ಶತಸಿದ್ಧ. ಅದಕ್ಕೆ ಎಲ್ಲಾ ಮತಬಾಂಧವರು ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ತೌಫಿಕ್ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿ ಮೂಲಕ ಹಾಗೂ ಜಾತ್ಯತೀತವಾಗಿ ಅವರನ್ನು ಬೆಂಬಲಿಸುವ ಮೂಲಕ ಅವರ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ನಮ್ಮ ತಾಲೂಕಿನಲ್ಲಿ ಮಾಜಿ ಸಚಿವ ಬಿ. ಶಿವರಾಂ ಅವರ ಉತ್ತಮ ನಾಯಕತ್ವದಲ್ಲಿ ಎಲ್ಲರೂ ಸಂಘಟಿತರಾಗಿ ಅವರ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಜಾತಿ ಜನಾಂಗದವರನ್ನು ಒಗ್ಗೂಡಿಸುವ ಮೂಲಕ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಬೆಳೆದಿದೆ’ ಎಂದು ತಿಳಿಸಿದರು.

ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ‘ಈ ಬಾರಿಯ ಅಹಿಂದ ಮತಗಳು ಬೇರೆ ಪಕ್ಷಕ್ಕೆ ಹೋಗದಂತೆ ಅದನ್ನು ಒಗ್ಗೂಡಿಸಲು ನಮ್ಮ ನಾಯಕರಾದ ಶಿವರಾಂ ಅವರ ನೇತೃತ್ವದಲ್ಲಿ ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದು ಪ್ರತಿಯೊಬ್ಬರನ್ನೂ ಸಹ ಸಮನಾಗಿ ಕಾಣುವ ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಲಿದೆ. ಅತಿ ಶೀಘ್ರದಲ್ಲೇ ನಮ್ಮ ಪಕ್ಷದ ವತಿಯಿಂದ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಳೆಬೀಡು ಜಾವಗಲ್ ಅಧ್ಯಕ್ಷ ಆನಂದ್ ದೇಸಾಣಿ, ಯುವ ಘಟಕದ ಅಧ್ಯಕ್ಷ ಅಶೋಕ್, ಮಾಜಿ ಅಧ್ಯಕ್ಷ ನಾಗರಾಜ್, ಪಕ್ಷದ ಇತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Share this article