ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣದ ಅವ್ಯವಹಾರದಲ್ಲಿ ರಾಜ್ಯ ಸರ್ಕಾರದ ಮೊದಲ ವಿಕೆಟ್ ಪತನವಾಗಿರುವುದು ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಎಸ್‌ಟಿ ವರ್ಗಕ್ಕೆ ಸೇರಿದ ಹಣ ದುರುಪ ಯೋಗವಾಗಿರುವ ಪ್ರಕರಣ ಬೆಳಕಿಗೆ ಬಿಜೆಪಿ ಹೋರಾಟ ನಡೆಸಿದ್ದು ಅದರ ಪರಿಣಾಮವಾಗಿ ಸಿಬಿಐ ತನಿಖೆಗೆ ವಹಿಸಿ ಸಚಿವ ನಾಗೇಂದ್ರ ರಾಜಿನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು ಬಿಜೆಪಿ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.ಈ ಹೋರಾಟವನ್ನು ಇಲ್ಲಿಗೆ ಬಿಡುವುದಿಲ್ಲ. ಸಮಗ್ರ ತನಿಖೆ ನಡೆದು ಈ ಹಗರಣದಲ್ಲಿ ಭಾಗಿಯಾಗಿರುವ ಸಂಪೂರ್ಣ ವಿವರ ಬಹಿರಂಗವಾಗುವವರೆಗೆ ಬಿಜೆಪಿ ಹೋರಾಡುತ್ತದೆ ಎಂದು ಹೇಳಿದ ಅವರು, ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 100 ಕೋಟಿ ಹಗರಣದ ಬಗ್ಗೆ ನೂತನ ಸಂಸತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಯವರ ಹೆಸರು ಪ್ರಾಸ್ತಾಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಪ ಮಾಡಿರುವ ಗೂಳಿಹಟ್ಟಿ ಡಿ.ಶೇಖರ್ ಸೂಕ್ತ ದಾಖಲೆಗಳನ್ನು ಜನರ ಮುಂದಿಟ್ಟು ಸಾಬೀತುಪಡಿಸಲಿ ಎಂದರು.
ಲೋಕಸಭಾ ಚುನಾವಣೆ ಬೆನ್ನಲ್ಲೇ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದ ಫಲಿತಾಂಶ ಬಂದಿದ್ದು, ಎನ್‌ಡಿಎ ಅಭ್ಯರ್ಥಿಗಳಾದ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದ ಡಾ. ಧನಂಜಯ ಸರ್ಜಿ ಜಯಗಳಿಸಿರುವುದು ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿದೆ ಎಂದು ತಿಳಿಸಿದರು.ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಪರ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ಪ್ರಬುದ್ಧ ಹಾಗೂ ಪ್ರಜ್ಞಾವಂತ ಮತದಾರರೆಲ್ಲರಿಗೂ ಪಕ್ಷ ಧನ್ಯವಾದ ತಿಳಿಸುತ್ತದೆ. ಈ ಇಬ್ಬರು ವಿಧಾನ ಪರಿಷತ್ ಸದಸ್ಯರು ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ. ವೆಂಕಟೇಶ್, ಬಿ.ರಾಜಪ್ಪ, ಎಂ.ಎಸ್. ನಿರಂಜನ್, ಎಚ್.ಎಸ್. ಪುಟ್ಟಸ್ವಾಮಿ. ದಿನೇಶ್ ಕೋಟೆ, ಸಚಿನ್‌ಗೌಡ, ರಾಜೀವ್, ನೆಟ್ಟಕೆರೆಹಳ್ಳಿ ಜಯಣ್ಣ, ಜೆಸೆಂತ ಅನಿಲ್‌ಕುಮಾರ್ ಇದ್ದರು.ಪೋಟೋ ಫೈಲ್ ನೇಮ್ 7 ಕೆಸಿಕೆಎಂ 5