ನರೇಗಲ್ಲ ಸಮೀಪದ ಹಾಲಕೆರೆಯಲ್ಲಿ ವಿದ್ಯಾರ್ಥಿಗಳಿಗಾಗಿ, ಪಾಲಕರಿಗಾಗಿ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ. 29, 30ರಂದು ಎರಡು ದಿನಗಳ ಅಕ್ಷರ ಜಾತ್ರೆ ಕಾರ್ಯಕ್ರಮ ನಡೆಯಲಿದೆ.
ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರ ಸಂಕಲ್ಪದಂತೆ ವಿದ್ಯಾರ್ಥಿಗಳಿಗಾಗಿ, ಪಾಲಕರಿಗಾಗಿ ನರೇಗಲ್ಲಿನ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ. 29, 30ರಂದು ಎರಡು ದಿನಗಳ ಅಕ್ಷರ ಜಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದು ಬಸವೇಶ್ವರ ಪ್ರಾಥಮಿಕ ಶಾಲೆಯ ಚೇರ್‌ಮನ್ ಡಾ. ಜಿ.ಕೆ. ಕಾಳೆ ಹೇಳಿದರು.
ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ವತಿಯಿಂದ ನಡೆಯುವ ಅಕ್ಷರ ಜಾತ್ರೆ-2025ರ ಅಂಗವಾಗಿ ಪ್ರಚಾರ ಸಮಿತಿಯಿಂದ ಕೋಡಿಕೊಪ್ಪದ ಶ್ರೀಮಠದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗಸಂಸ್ಥೆಯ ಎಲ್ಲ ಮಕ್ಕಳಿಗೆ ಸಂಪೂರ್ಣ ಶೈಕ್ಷಣಿಕ ಜ್ಞಾನ ಒದಗಿಸುವುದು, ಸ್ಪರ್ಧಾತ್ಮಕ ಭಾವನೆ ಬೆಳೆಸುವುದು ಹಾಗೂ ಅವರಲ್ಲಿನ ಪ್ರತಿಭೆಯನ್ನು ಹೊರ ಹಾಕುವುದು ಅಕ್ಷರ ಜಾತ್ರೆಯ ಮೂಲ ಉದ್ದೇಶವಾಗಿದೆ. ನರೇಗಲ್, ಗಜೇಂದ್ರಗಡ, ಗದಗ, ಬೇಲೂರು, ಹನಮಸಾಗರ, ಕುಷ್ಟಗಿ, ನೀಡಗುಂದಿ, ಹಾಲಕೆರೆ, ಹೊಸಪೇಟೆ ಸೇರಿದಂತೆ ವಿವಿಧ ಕಡೆ ಇರುವ ಅಂಗ ಸಂಸ್ಥೆಗಳ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಅವರಿಗೆ ವಸತಿ, ಊಟ ವ್ಯವಸ್ಥೆ ಮಾಡಲಾಗಿದೆ. ದೇಶಿ ಕಲೆಗಳ ಪ್ರದರ್ಶನ, ಕೈಗಾರಿಕಾ ಮತ್ತು ವೈಜ್ಞಾನಿಕ ಪ್ರಯೋಗಗಳ ಪ್ರದರ್ಶನ, ಆಹಾರ ಮೇಳ, ಉದ್ಯೋಗ ಮೇಳ, ತಾರಾಲಯ ವೀಕ್ಷಣೆ ಸೇರಿದಂತೆ ಅನೇಕ ಉಪಯುಕ್ತ ಚಟುವಟಿಕೆ ಮಕ್ಕಳಿಂದಲೇ ನಡೆಯಲಿವೆ. ಹೆಸರಾಂತ ಸಾಧಕರಿಂದ ಎರಡು ವೇದಿಕೆಗಳಲ್ಲಿ ಗೋಷ್ಠಿಗಳು ನಡೆಯಲಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಕ್ಷರದ ತೇರು ಎಳೆಯಲ್ಪಡಲಿದೆ ಎಂದು ಮಾಹಿತಿ ನೀಡಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಕಳೆದ ವರ್ಷವೇ ಇದನ್ನು ನೆರವೇರಿಸಲು ಶ್ರೀಗಳವರು ನಿರ್ಧರಿಸಿದ್ದರು. ಆದರೆ ಕೆಲವಷ್ಟು ತಾಂತ್ರಿಕ ಕಾರಣಗಳಿಂದ ಈ ಕಾರ್ಯ ಸಾಧ್ಯವಾಗಿರಲಿಲ್ಲ. ಮೂರು ತಿಂಗಳಿಂದ ಸಮಿತಿಗಳನ್ನು ರಚನೆ ಮಾಡಿ ಸಿದ್ಧತೆ ನಡೆದಿದೆ. ಮಕ್ಕಳಿಗೆ ಕರಡಿ ಮಜಲು, ಜೋಗತಿ ನೃತ್ಯ, ಗೋರಪ್ಪನ ನೃತ್ಯದಂತಹ ಅನೇಕ ಕಲೆಗಳ ತರಬೇತಿ ನೀಡಲಾಗಿದೆ. ಇದೊಂದು ಅಪರೂಪದ ಜಾತ್ರೆಯಾಗಿರಲಿದೆ ಎಂದರು.
ಪ್ರಾಚಾರ್ಯ ವೈ.ಸಿ. ಪಾಟೀಲ, ಪದವಿ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ಎ.ಪಿ. ಗಾಣಿಗೇರ, ಆಡಳಿತ ಮಂಡಳಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ, ಸಿ.ಐ. ಮರಡಿಮಠ, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.