ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಶ್ವೇತ ವರ್ಣದ ಶರ್ಟ್, ಪಂಚೆ ಧರಿಸಿ, ತಲೆಗೆ ರುಮಾಲಿನಿಂದ ಪೇಟ ಸುತ್ತಿಕೊಂಡು ಪ್ರವಾಸಿಮಂದಿರದಿಂದ ಸ್ವತ ಎತ್ತಿನಗಾಡಿ ಮೇಲೆ ನಿಂತು ಚಲಾಯಿಸಿಕೊಂಡು ಕಾರ್ಯಕ್ರಮ ಸ್ಥಳವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಕಬ್ಬು ತಳಿರು ತೋರಣಗಳು, ನವಧಾನ್ಯಗಳಿಂದ ಸಿಂಗರಿಸಿದ್ದ ಜಾನಪದ ಹಿನ್ನೆಲೆಯ ವೇದಿಕೆಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಂಬೂರಿ ನುಡಿಸುವ ಮೂಲಕ ಜಾನಪದ ವೈಭವಕ್ಕೆ ಚಾಲನೆ ನೀಡಿದರು. ಸಂಪ್ರಾದಾಯಿಕವಾಗಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.ಕಾಲೇಜು ಪ್ರಾಂಶುಪಾಲರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಎಲ್ಲರು ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಿ ಜಾನಪದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.ಜಾನಪದ ಕಲೆಗಳ ತವರು
ಸಂಕ್ರಾಂತಿ, ಯುಗಾದಿ ನಮ್ಮ ಜನಪದಕ್ಕೆ ಅತ್ಯಂತ ಹತ್ತಿರವಾಗಿದೆ. ಸಂಕ್ರಾಂತಿಯಂದು ಧಾನ್ಯಗಳು ಗೋವನ್ನು ಪೂಜೆ ಮಾಡುತ್ತೇವೆ. ಯುಗಾದಿಯಂದು ರೈತರು ಹೊನ್ನೇರು ಕಟ್ಟಿ ಭೂತಾಯಿಗೆ ನಮಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಾರೆ. ಇಂತಹ ಸಂಭ್ರಮದ ಕಾಲದಲ್ಲಿಯೇ ಜಾನಪದ ವೈಭವವನ್ನು ಕಾಲೇಜಿನಲ್ಲಿ ಆಯೋಜನೆ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಪಿ.ಎಸ್. ಗುರುಪ್ರಸಾದ್ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ ಆದೇಶದಂತೆ ಜಾನಪದ ವೈಭವ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಜನಪದ ಸೊಗಡು ಆವರಿಸಬೇಕೆಂಬ ಉದ್ದೇಶದಿಂದ ಗ್ರಾಮೀಣ, ದೇಸಿ ವಸ್ತುಗಳಿಂದ ವೇದಿಕೆಯನ್ನು ಅಲಂಕರಿಸಿದ್ದೇವೆ. ವಿದ್ಯಾರ್ಥಿಗಳೊಂದಿಗೆ ಇಡೀ ದಿನ ನಾನಾ ಜನಪದ ಚಟುವಟಿಕೆಗಳನ್ನು ಆಯೋಜಿಸಿದ್ದೇವೆ ಎಂದರು.
ಉದ್ಘಾಟನಾ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಜೊತೆಗೂಡಿ ದೇಸಿ ಆಟಗಳಾದ ಚೌಕಭಾರ (ಘಟ್ಟಮನೆ), ಅಳಿಗುಳಿ ಮನೆ, ಗೋರಿ, ಬುಗುರಿ ಆಡಿ ಸಂಭ್ರಮಿಸಿದರು. ದೇಸಿ ಅಡುಗೆ ತಿನಿಸುಗಳನ್ನು ತಯಾರಿಸಿ ಖುಷಿಪಟ್ಟರು.