ಹೆಚ್ಚುತ್ತಿರುವ ಅಪಘಾತ: ದನಕರುಗಳ ಮೂಕರೋದನ

KannadaprabhaNewsNetwork | Published : Jun 24, 2024 1:37 AM

ಸಾರಾಂಶ

ಕುಮಟಾ, ಹೊನ್ನಾವರ ತಾಲೂಕಿನ ಗೋ ಶಾಲೆಗಳನ್ನು ವಿಚಾರಿಸಿದರೆ ತಮ್ಮಲ್ಲಿ ಸಾಕಷ್ಟು ದನಗಳಿದ್ದು, ಜಾಗ ಭರ್ತಿಯಾಗಿದೆ ಎನ್ನುತ್ತಾರೆ.

ಗೋಕರ್ಣ: ಮನೆ, ಅಂಗಡಿಯವರು ನೀಡಿದ ತಿಂಡಿ, ಬೀದಿಯಲ್ಲಿ ಬಿದ್ದ ಹಳಸಲು ಪದಾರ್ಥ ತಿಂದು ಸ್ವಲ್ಪ ವಿಶ್ರಾಂತಿಗೆಂದು ಬಸ್ ಅಡಿ, ರಸ್ತೆ ಅಂಚಿನಲ್ಲಿ ಮಲಗುವ ದನಗಳಿಗೆ ವಾಹನ ಬಡಿದು ಅಪಘಾತವಾಗುವುದು ದಿನೇ ದಿನೇ ಹೆಚ್ಚುತ್ತಿದ್ದು, ಮೂಕಪ್ರಾಣಿಯ ನರಕಯಾತನೆ ಹೇಳತೀರದಾಗಿದೆ.

ಕಳೆದ ಮೂರು ದಿನದ ಹಿಂದೆ ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಆವಾರದಲ್ಲಿ ಅಂದಾಜು ಎರಡು ವರ್ಷದ ಗಂಡು ಕರು ಬಸ್ ಬಡಿದು ಎಲುಬು ತುಂಡಾಗಿ ಯಾತನೆ ಅನುಭವಿಸಿತ್ತು. ಈ ಕುರಿತು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದರು. ನಂತರ ಗ್ರಾಪಂ ಸದಸ್ಯ ಹಾಗೂ ಪ್ರಾಣಿ ಪ್ರಿಯ ಸುಜಯ ಶೆಟ್ಟಿ ಅವರಿಗೆ ತಿಳಿಸಿ ಚಿಕಿತ್ಸೆಗೆ ನೆರವಾಗುವಂತೆ ಕೋರಲಾಗಿತ್ತು.

ತಕ್ಷಣ ಸ್ಪಂದಿಸಿ ಸುಜಯ ಪಶುವೈದ್ಯ ಸಹಾಯಕರು ಕರೆತಂದು ತುರ್ತು ಚಿಕಿತ್ಸೆ ಕೊಡಿಸಿದ್ದರು. ನಂತರ ಬಸ್ ನಿಲ್ದಾಣದಲ್ಲೇ ಆಶ್ರಯ ನೀಡಲಾಗಿತ್ತು. ಶನಿವಾರ ಮತ್ತಷ್ಟು ನರಳಾಟ ಜಾಸ್ತಿಯಾದ ಕಾರಣ ಪಶು ಸಂಜೀವಿನಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲ ಸಹಕಾರವನ್ನು ಸುಜಯ ಮಾಡುತ್ತಿದ್ದು, ಅವರಿಗೆ ಇಲ್ಲಿನ ಅಟೋ ಚಾಲಕ, ಮಾಲೀಕರು ನೆರವಾಗುತ್ತಿದ್ದಾರೆ. ಆದರೆ, ಇದರ ನಿರಂತರ ಆರೈಕೆಗೆ ಕನಿಷ್ಟ ಮೂರರಿಂದ ನಾಲ್ಕು ತಿಂಗಳ ಬೇಕಾಗಿದ್ದು, ಎಲ್ಲಾದರೂ ಆಶ್ರಯ ನೀಡಿ ನೋಡಿಕೊಳ್ಳುವರೇ ಇಲ್ಲವಾಗಿದ್ದಾರೆ.

ಗೋಶಾಲೆಯಲ್ಲಿ ಜಾಗವಿಲ್ಲ: ಕುಮಟಾ, ಹೊನ್ನಾವರ ತಾಲೂಕಿನ ಗೋ ಶಾಲೆಗಳನ್ನು ವಿಚಾರಿಸಿದರೆ ತಮ್ಮಲ್ಲಿ ಸಾಕಷ್ಟು ದನಗಳಿದ್ದು, ಜಾಗ ಭರ್ತಿಯಾಗಿದೆ ಎನ್ನುತ್ತಾರೆ. ಅಲ್ಲದೇ ಕಟುಕರ ಕೈಯಿಂದ ರಕ್ಷಿಸಿದ ದನಗಳನ್ನು ಗೋಶಾಲೆಯಲ್ಲಿ ಬಿಡುತ್ತಾರೆ. ಇದರ ಜತೆ ಗಾಯಗೊಂಡ ಹಾಗೂ ವಯಸ್ಸಾದ ಗೋವುಗಳನ್ನು ಜನರು ತಂದು ಬಿಟ್ಟುಹೋಗುತ್ತಿರುವ ಕಾರಣ ಮತ್ತೆ ಸೇರಿಸಿಕೊಳ್ಳುವುದು ಅಸಾಧ್ಯ ಎಂದು ಕೈಚೆಲ್ಲುತ್ತಾರೆ.

Share this article