ಜನಗಣತಿ ನಂತರವೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಭಾಗ್ಯ?

KannadaprabhaNewsNetwork |  
Published : Aug 21, 2026, 02:00 AM IST
ಧಾರವಾಡ ಮಹಾನಗರ ಪಾಲಿಕೆ | Kannada Prabha

ಸಾರಾಂಶ

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಬೇಡಿಕೆಯು ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಇನ್ನೇನು ಅಂತಿಮ ಅಧಿಸೂಚನೆ ಹೊರಡಿಸಿದರು ಎನ್ನುವ ಹೊತ್ತಿಗೆ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಯೊಂದನ್ನು ಮುಂದಿಟ್ಟುಕೊಂಡು ಧಾರವಾಡದವರ ಭಾವನೆಗಳಿಗೆ ಮತ್ತೊಮ್ಮೆ ಧಕ್ಕೆ ತಂದಿದೆ.

ಧಾರವಾಡ:

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಬೇಡಿಕೆಯು ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಇನ್ನೇನು ಅಂತಿಮ ಅಧಿಸೂಚನೆ ಹೊರಡಿಸಿದರು ಎನ್ನುವ ಹೊತ್ತಿಗೆ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಯೊಂದನ್ನು ಮುಂದಿಟ್ಟುಕೊಂಡು ಧಾರವಾಡದವರ ಭಾವನೆಗಳಿಗೆ ಮತ್ತೊಮ್ಮೆ ಧಕ್ಕೆ ತಂದಿದೆ.

ಪ್ರತ್ಯೇಕ ಪಾಲಿಕೆ ರಚಿಸುವಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಕುರಿತು ಅಧಿವೇಶನದಲ್ಲಿ ಶಾಸಕ ವಿನಯ ಕುಲಕರ್ಣಿ ಅವರು ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯನವರು ನೀಡಿದ ಉತ್ತರ ಧಾರವಾಡದ ಜನತೆ ಹಾಗೂ ಹೋರಾಟಗಾರರಿಗೆ ಅಸಮಾಧಾನ ತಂದಿದೆ.

ಏನಂತ ಉತ್ತರ:

ರಾಷ್ಟ್ರಾದ್ಯಂತ ಜನಗಣತಿ-2027ರ ಕ್ರಮಗಳು ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಗಡಿಗಳನ್ನು ಮಾರ್ಪಡಿಸಲು 2025 ಡಿಸೆಂಬರ್‌ 31ರ ನಂತರದಿಂದ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸುವ ಪ್ರಸ್ತಾವನೆಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಜನಗಣತಿ ಅಂಕಿ-ಅಂಶಗಳು ಪ್ರಕಟಗೊಂಡ ತರುವಾಯ, ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲು ಅವಕಾಶ ಕಲ್ಪಿಸಿದ ನಂತರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲು ಕ್ರಮ ವಹಿಸಲು ಅವಕಾಶವಿದೆ ಎಂದು ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.

ಈ ಉತ್ತರ ಗಮನಿಸಿದರೆ, ಮಹಾನಗರ ಪಾಲಿಕೆ ವಿಭಜನೆ ನಿರ್ಣಯ ಜನಗಣತಿ ಫಲಿತಾಂಶ ಬರುವ ವರೆಗೂ ಅಂದರೆ 2027ರ ವರ್ಷಾಂತ್ಯ ಅಥವಾ 2028ರ ಪ್ರಾರಂಭದ ವರೆಗೆ ಮುಂದೂಡಿದಂತಾಗಿದೆ ಎಂಬ ತಿಳಿವಳಿಕೆಯಿಂದ ಧಾರವಾಡದ ಜನ ಹಾಗೂ ಹೋರಾಟಗಾರರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಏನೇನಾಗಿತ್ತು?:

2025ರ ಜನವರಿ 21ರಂದು ರಾಜ್ಯ ಸರ್ಕಾರವೇ ಅಧಿಸೂಚನೆ ಹೊರಡಿಸಿ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಧಾರವಾಡ ಮಹಾನಗರ ಪಾಲಿಕೆ ಎಂದು ಪ್ರಕಟಿಸಿದೆ. ಆಕ್ಷೇಪಣೆ ಹೊರಡಿಸಿ ಆಕ್ಷೇಪಣೆಗಳು ಬರದೇ ಹೋದಾಗ ರಾಜ್ಯಪಾಲರ ಅನುಮೋದನೆಗೂ ಕಳುಹಿಸಲಾಗಿತ್ತು. ರಾಜ್ಯಪಾಲರು ಸಹ ಸಹಿ ಹಾಕಿ ಸರ್ಕಾರಕ್ಕೆ ಕಳುಹಿಸಿ ನಾಲ್ಕು ತಿಂಗಳಾಗಿದ್ದು, ಇದೀಗ ರಾಜ್ಯ ಸರ್ಕಾರ ತಾಂತ್ರಿಕ ನೆಪವನ್ನು ಹೇಳುತ್ತಿರುವುದು ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆ, ಇತ್ತೀಚೆಗೆ ಪ್ರತ್ಯೇಕ ಪಾಲಿಕೆ ಬೇಡ ಮೆಟ್ರೋಪಾಲಿಟನ್‌ ಸಿಟಿ ಮಾಡಿ ಎಂಬ ಕೂಗು ಎದ್ದಿದ್ದು, ಸದ್ಯಕ್ಕಂತೂ ಪ್ರತ್ಯೇಕ ಪಾಲಿಕೆ ಇಲ್ಲ. ಹೀಗಾಗಿ ಈ ಅವಧಿಯಲ್ಲಿ ಸರ್ಕಾರ ತಜ್ಞರ ಸಮಿತಿ ರಚಿಸಿ ಹುಬ್ಬಳ್ಳಿ-ಧಾರವಾಡವನ್ನು ರಾಜ್ಯದ ಮುಂದಿನ ಮೆಟ್ರೋಪಾಲಿಟನ್ ನಗರವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ನೀಲನಕ್ಷೆ ಸಿದ್ಧಪಡಿಸಲು ಬಳಸಿಕೊಳ್ಳಬೇಕು. ಅವಳಿ ನಗರವನ್ನು ಒಂದು ಸುಂದರ ಹಾಗೂ ಬಲಿಷ್ಠ ಮೆಟ್ರೊಪಾಲಿಟನ್ ನಗರವನ್ನಾಗಿ ಘೋಷಿಸಿ ಬೆಳೆಸುವ ಬೇಡಿಕೆ ಮುಂದುವರಿಯಲಿ ಎಂದು ಮೆಟ್ರೋಪಾಲಿಟನ್‌ ಸಿಟಿ ಹೋರಾಟಗಾರ ಸಂತೋಷ ನರಗುಂದ ಪ್ರತಿಕ್ರಿಯಿಸಿದ್ದಾರೆ.

ಇನ್ನೇನು ಪ್ರತ್ಯೇಕ ಪಾಲಿಕೆಯ ಅಂತಿಮ ಅಧಿಸೂಚನೆ ಹೊರಡಿಸಿದರು ಎನ್ನುವ ಹೊತ್ತಿಗೆ ಮುಖ್ಯಮಂತ್ರಿಗಳ ಬದಲಾವಣೆ, ತದನಂತರ ಈಗ ಜನಗಣತಿ ಅಡ್ಡಿಯಿಂದ ಕಂಗೆಟ್ಟಿರುವ ಪ್ರತ್ಯೇಕ ಪಾಲಿಕೆ ಹೋರಾಟಗಾರರು ಸರ್ಕಾರದ ಈ ನಿರ್ಧಾರವನ್ನು ಯಾವ ರೀತಿ ಪ್ರತಿಭಟಿಸುತ್ತಾರೆ ಕಾದು ನೋಡಬೇಕಿದೆ. ಸರ್ಕಾರದ ಉತ್ತರ ಹೊಸದೇನಲ್ಲ...

ಪ್ರತ್ಯೇಕ ಪಾಲಿಕೆಯ ಅಂತಿಮ ಅಧಿಸೂಚನೆಗೂ, ಜನಗಣತಿಗೂ ಸಂಬಂಧವಿಲ್ಲ. ರಾಜ್ಯಪಾಲರು ಸಹ ಇದೇ ಅಂಶ ಮುಂದಿಟ್ಟಿದ್ದರು. ಪ್ರತ್ಯೇಕ ಪಾಲಿಕೆಯ ಅನುಷ್ಠಾನ ಜನಗಣತಿ ಮುಗಿದ ನಂತರವೇ ಆಗಲಿ. ಆದರೆ, ಅಂತಿಮ ಅಧಿಸೂಚನೆ ಮಾತ್ರ ಈಗ ಹೊರಡಿಸಲಿ ಎಂಬುದೇ ನಮ್ಮ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲು ಸಮಯ ಕೋರಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರಿಗೆ ತಿಳಿಸಿದ್ದೇವೆ. ಸಮಯ ಒದಗಿಸಿದರೆ ಅವರೊಂದಿಗೆ ಚರ್ಚಿಸಿ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತೇವೆ. ವಿನಯ ಕುಲಕರ್ಣಿ ಅವರ ಪ್ರಶ್ನೆಗೆ ಸಚಿವ ಯತೀಂದ್ರ ಅವರು ನೀಡಿದ ಉತ್ತರ ಹೊಸದೇನಲ್ಲ.

ಬಿ.ಡಿ. ಹಿರೇಮಠ, ಪ್ರತ್ಯೇಕ ಪಾಲಿಕೆ ಹೋರಾಟಗಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಿ
ಚಿಕನ್ ಕಂಪನಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ