ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಕಲೇಶಪುರ ಪುರಸಭೆಗೆ ನಷ್ಟ

KannadaprabhaNewsNetwork |  
Published : Aug 21, 2026, 02:00 AM IST
19ಎಚ್ಎಸ್ಎನ್9 :  | Kannada Prabha

ಸಾರಾಂಶ

ಸಕಲೇಶಪುರ ಪಟ್ಟಣದ ಪುರಸಭೆ ಮಾಲಿಕತ್ವದ ವಾಣಿಜ್ಯಮಳಿಗೆಗಳನ್ನು ಒಮ್ಮೆ ಬಾಡಿಗೆಗೆ ಪಡೆದರೆ, ವರ್ತಕರು ಬಾಡಿಗೆಯನ್ನೆ ಸಂದಾಯ ಮಾಡುತ್ತಿಲ್ಲ. ಪುರಸಭೆ ಮಾಲೀಕತ್ವದಲ್ಲಿ ಪಟ್ಟಣದಲ್ಲಿ ೧೯೬ ಮಳಿಗೆಗಳಿದ್ದು ಇದರಲ್ಲಿ ೧೨೫ ಮಳಿಗೆಗಳಲ್ಲಿ ವಹಿವಾಟು ನಡೆಸಲಾಗುತ್ತಿದ್ದು, ವಾರ್ಷಿಕ ₹ ೫೬ ಲಕ್ಷ ಆದಾಯದ ನಿರೀಕ್ಷೆ ಇದೆ. ಆದರೆ, ಬಹುತೇಕ ಅಂಗಡಿ ಮಾಲೀಕರು ತಮ್ಮ ಕಳೆದ ಹಲವು ವರ್ಷಗಳಿಂದ ಬಾಡಿಗೆಗಳನ್ನು ಸಂದಾಯ ಮಾಡದ ಕಾರಣ ಪುರಸಭೆಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪುರಸಭೆ ಮಾಲೀಕತ್ವದ ಮಳಿಗೆಗಳಿಂದ ಬಾಡಿಗೆ ಬಾರದಂತಾಗಿದ್ದು, ಭಾರೀ ನಷ್ಟ ಉಂಟಾಗುತ್ತಿದೆ.

ಖಾಸಗಿ ಮಾಲೀಕತ್ವದ ಕಟ್ಟಡದಲ್ಲಿ ಒಂದು ತಿಂಗಳು ಬಾಡಿಗೆ ಕಟ್ಟದಿದ್ದರೆ ಅಂಗಡಿಮುಂಗಟ್ಟನ್ನು ಬಾಗಿಲು ಬಂದ್‌ ಮಾಡುವ ಆತಂಕ ಬಾಡಿಗೆದಾರರಿಗೆ. ಆದರೆ, ಪಟ್ಟಣದ ಪುರಸಭೆ ಮಾಲಿಕತ್ವದ ವಾಣಿಜ್ಯಮಳಿಗೆಗಳನ್ನು ಒಮ್ಮೆ ಬಾಡಿಗೆಗೆ ಪಡೆದರೆ, ವರ್ತಕರು ಬಾಡಿಗೆಯನ್ನೆ ಸಂದಾಯ ಮಾಡುತ್ತಿಲ್ಲ. ಪುರಸಭೆ ಮಾಲೀಕತ್ವದಲ್ಲಿ ಪಟ್ಟಣದಲ್ಲಿ ೧೯೬ ಮಳಿಗೆಗಳಿದ್ದು ಇದರಲ್ಲಿ ೧೨೫ ಮಳಿಗೆಗಳಲ್ಲಿ ವಹಿವಾಟು ನಡೆಸಲಾಗುತ್ತಿದ್ದು, ವಾರ್ಷಿಕ ₹ ೫೬ ಲಕ್ಷ ಆದಾಯದ ನಿರೀಕ್ಷೆ ಇದೆ. ಆದರೆ, ಬಹುತೇಕ ಅಂಗಡಿ ಮಾಲೀಕರು ತಮ್ಮ ಕಳೆದ ಹಲವು ವರ್ಷಗಳಿಂದ ಬಾಡಿಗೆಗಳನ್ನು ಸಂದಾಯ ಮಾಡದ ಕಾರಣ ಪುರಸಭೆಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಪುರಸಭೆ ಎದುರಿನ ವಾಣಿಜ್ಯ ಮಳಿಗೆಗಳಲ್ಲಿ ೨೦ ವಾಣಿಜ್ಯ ಮಳಿಗೆಗಳಿದ್ದು ೧೯೮೪ರಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ವೇಳೆಯಿಂದ ಇಲ್ಲಿನ ಮಳಿಗೆಗಳನ್ನು ಹಲವರು ಸ್ವಂತ ಮಳಿಗೆಗಳನ್ನಾಗಿ ಮಾಡಿಕೊಂಡಿದ್ದು ೨೦೧೪ರ ವೇಳೆ ಇಲ್ಲಿನ ಮಳಿಗೆದಾರರಿಂದ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಆದರೆ, ಪಟ್ಟಣದ ಹೃದಯ ಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳನ್ನು ಮರುಹರಾಜು ಮಾಡಬೇಕು. ಇದರಿಂದ ಪುರಸಭೆಗೆ ಹೆಚ್ಚು ಪ್ರಮಾಣದ ಆದಾಯ ಬರಲಿದೆ ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಏಪ್ರಿಲ್ ೨೦೨೪ರಲ್ಲಿ ಮರು ಹರಾಜು ನಡೆಸಲಾಗಿತ್ತು. ಆದರೆ, ಇಲ್ಲಿನ ವರ್ತಕರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಮರು ಹರಾಜು ನೆನಗುದಿಗೆ ಬಿದ್ದಿದೆ. ಹೊಸ ಹರಾಜು ವೇಳೆ ಇಡಿಗಂಟು ಕಟ್ಟಿದವರಿಗೆ ಇಂದಿಗೂ ಮಳಿಗೆಯನ್ನು ನೀಡಲಾಗಿಲ್ಲ. ಇಡಿಗಂಟನ್ನು ಹಿಂದೆ ನೀಡಲಾಗಿಲ್ಲ. ಈ ಇಪ್ಪತ್ತು ಮಳಿಗೆಗಳಿಂದ ಹಿಂದಿನ ದರದಂತೆ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಇದೇ ಸ್ಥಿತಿ ಬಸವೇಶ್ವರ ರಸ್ತೆಯಲ್ಲಿರುವ ೩೪ ಮಳಿಗೆಗಳದ್ದಾಗಿದ್ದು ಇಲ್ಲಿನ ವರ್ತಕರು ಸಹ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಹಿಂದಿನ ದರದಲ್ಲೇ ಬಾಡಿಗೆ ಪಡೆಯಲಾಗುತ್ತಿರುವುದರಿಂದ ಪುರಸಭೆಗೆ ನಷ್ಟವಾಗುತ್ತಿದೆ.

ಬಾಡಿಗೆಯೇ ಇಲ್ಲ:

ಪುರಸಭೆಗೆ ಯಾವುದೇ ನಿಶ್ಚಿತ ಆದಾಯವಿಲ್ಲದಿದ್ದರು ೧೯೮೦ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ರಂಗಶೆಟ್ಟಿ ಮಹತ್ವಕಾಂಕ್ಷೆಯ ೩೬ ಮಳಿಗೆಗಳನ್ನು ಹೊಂದಿರುವ ಹೇಮಾವತಿ ವಾಣಿಜ್ಯ ಸಂಕೀರ್ಣ ಒಂದು ಹಾಗೂ ೩೯ ಮಳಿಗೆಗಳನ್ನು ಹೊಂದಿರುವ ಹೇಮಾವತಿ ವಾಣಿಜ್ಯ ಸಂಕೀರ್ಣ ಎರಡನ್ನೂ ನಿರ್ಮಿಸಿದ್ದರು. ಇವರ ನಂತರ ಪುರಸಭೆ ಪುರಪಿತೃಗಳಾಗಿ ಆಗಮಿಸಿದ ಹಲವರು ತಮ್ಮ ಸ್ವಂತಕ್ಕೆ ಅಂಗಡಿಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಇಡಿ ವಾಣಿಜ್ಯ ಸಂಕೀರ್ಣದ ಮೂಲವಿನ್ಯಾಸವನ್ನು ಬದಲಿಸಿ ತಮಗೆ ಇಷ್ಟ ಬಂದಂತೆ ಅಂಗಡಿಗಳನ್ನು ನಿರ್ಮಿಸಿಕೊಂಡ ಪರಿಣಾಮ ಇಡೀ ಕಟ್ಟಡ ಹಲವು ವರ್ಷಗಳಿಂದ ಮಳೆನೀರಿನಿಂದ ಸೋರಲಾರಂಭಿಸಿದೆ. ಈ ಎರಡು ವಾಣಿಜ್ಯ ಸಂಕೀರ್ಣದಲ್ಲಿರುವ ೭೫ ಮಳಿಗೆಗಳ ಪೈಕಿ ೫೦ಕ್ಕೂ ಅಧಿಕ ಮಳಿಗೆಗಳು ಸಕ್ರಿಯವಾಗಿವೆ. ಆದರೆ, ವಾಣಿಜ್ಯ ಮಳಿಗೆ ಬಹುತೇಕ ದುರಸ್ತಿಗೆ ಈಡಾಗಿದ್ದರಿಂದ ಈ ಎರಡು ವಾಣಿಜ್ಯ ಸಂಕೀರ್ಣವನ್ನು ನೆಲಸಮಗೊಳಿಸುವಂತೆ ಅಕ್ಟೋಬರ್ ೨೦೨೫ ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ಈ ಎಲ್ಲ ೫೦ ವಾಣಿಜ್ಯ ಮಳಿಗೆಗಳಿಂದ ಪುರಸಭೆ ಯಾವುದೇ ಬಾಡಿಗೆ ವಸೂಲಾತಿ ಮಾಡುತ್ತಿಲ್ಲ. ಮಳಿಗೆಗಳನ್ನು ಖಾಲಿ ಮಾಡುವಂತೆ ಪುರಸಭೆ ಒಮ್ಮೆ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಿದೆ. ಆದರೆ, ಪುರಸಭೆ ನೋಟಿಸ್‌ಗೆ ತಲೆಕೆಡಿಸಿಕೊಳ್ಳದ ವಾಣಿಜ್ಯ ಮಳಿಗೆಗಳ ಮಾಲೀಕರು ನಿತ್ಯ ತಮ್ಮ ವಹಿವಾಟು ನಡೆಸುತ್ತಿದ್ದಾರೆ. ನಿತ್ಯ ಕೋಟ್ಯಂತರ ವಹಿವಾಟು ನಡೆಯುವ ಈ ಮಳಿಗೆಗಳಿಗೆ ನಯಾಪೈಸೆ ಬಾಡಿಗೆ ಕಟ್ಟದಿದ್ದರು ಪುರಸಭೆ ಅಧಿಕಾರಿಗಳು ಕಳೆದ ೧೦ ತಿಂಗಳಿನಿಂದ ಕಣ್ಮುಚ್ಚಿ ಕುಳಿತಿದ್ದು, ಮಳಿಗೆ ಖಾಲಿ ಮಾಡಿಸುವ ಯಾವ ಹೊಣೆಯನ್ನೂ ಹೊರುತ್ತಿಲ್ಲ.

೧೦ನೇ ಹಣಕಾಸು ನಿಧಿಯಲ್ಲಿ ಪಟ್ಟಣದ ಹಳೇಸಂತೆ ಮೈದಾನದಲ್ಲಿ ಮಾಂಸ ಮಾರಾಟಕ್ಕಾಗಿ ೯ ಮಳಿಗೆಗಳನ್ನು ೧೯೯೪-೯೫ನೇ ಸಾಲಿನಲ್ಲಿ ನಿರ್ಮಿಸಲಾಗಿದೆ. ಆದರೆ ಇಲ್ಲಿ ಮಾಂಸ ಮಾರುಕಟ್ಟೆ ಮಾಡಲು ಸಮೀಪದಲ್ಲೆ ಇರುವ ಸುಬಾಷ್ ಮೈದಾನದ ಆಟಗಾರರ ವಿರೋಧ ವ್ಯಕ್ತಪಡಿಸಿದರು. ಅಂದಿನಿಂದ ಇಂದಿನವರಗೆ ಇಲ್ಲಿನ ಮಳಿಗೆಗಳು ಪುರಸಭೆ ಲೆಕ್ಕದಲ್ಲಿ ಖಾಲಿ ಉಳಿದಿವೆ. ಆದರೆ ಬಹುತೇಕ ಈ ಎಲ್ಲ ಮಳಿಗೆಗಳು ಹಲವು ವರ್ತಕರ ಗೋಧಾಮಾಗಿ ಪರಿವರ್ತನೆಗೊಂಡು ಲಕ್ಷಾಂತರರೂ ಸಂಪಾಧಿಸುತ್ತಿದ್ದಾರೆ. ಹಾಗೇಯೆ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ೧೧ ಮಳಿಗೆಗಳಿದ್ದು ಇದರಲ್ಲಿ ೩ ಮಳಿಗೆಗಳಿಂದ ಮಾತ್ರ ಪುರಸಬೆಗೆ ಬಾಡಿಗೆ ಸಂದಾಯವಾಗುತ್ತಿದೆ. ಆದರೆ, ಪುರಸಭೆ ಲೆಕ್ಕದ ಪ್ರಕಾರ ಇನ್ನೊಳಿದ ಎಲ್ಲ ಮಳಿಗೆಗಳು ಖಾಲಿ ಎನ್ನಲಾಗುತಿದೆ. ಆದರೆ ಈ ಎಲ್ಲ ೮ ಮಳಿಗೆಗಳು ಬೇನಾಮಿಯಾಗಿ ಕಾರ್ಯನಿರ್ವಹಿಸುವ ಮೂಲಕ ಪುರಸಬೆಗೆ ವಂಚಿಸಲಾಗುತ್ತಿದೆ ಈ ವಿಚಾರ ಪುರಸಭೆ ಅಧಿಕಾರಿಗಳಿಗೆ ತಿಳಿದಿದ್ದರು ಜಾಣ ಮೌನಕ್ಕೆ ಶರಣಾಗಿದ್ದರೆ.ಅಜಾದ್ ರಸ್ತೆಯ ದನದ ದೊಡ್ಡಿ ಇರುವ ಜಾಗದಲ್ಲಿ ಪುರಸಭೆ ಆರು ಮಳಿಗೆಗಳನ್ನು ಕಳೆದ ಹತ್ತು ವರ್ಷಗಳ ಹಿಂದೆ ಆರು ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಈ ಮಳಿಗೆಗಳ ಪೈಕಿ ಎರಡು ಮಳಿಗೆಗಳಲ್ಲಿ ವರ್ತಕರು ತಮ್ಮ ವಹಿವಾಟು ನಡೆಸುತ್ತಿದ್ದಾರೆ. ಆದರೆ, ವಹಿವಾಟು ನಡೆಸುತ್ತಿರುವ ವರ್ತಕರು ಮಾತ್ರ ಪುರಸಭೆಗೆ ಬಾಡಿಗೆ ಕಟ್ಟಲು ಸಿದ್ಧರಿಲ್ಲದ ಕಾರಣ ಒಂದು ಮಳಿಗೆ ಬಾಕಿ ಬಾಡಿಗೆ ೨.೫೦ ಲಕ್ಷ ಮತ್ತೊಂದು ಮಳಿಗೆ ಬಾಡಿಗೆ ೧.೭೬ ಲಕ್ಷ ಬಾಕಿ ಇದೆ. ಇನ್ನೂ ಅಜಾದ್ ರಸ್ತೆಯ ಶ್ರೀನಿವಾಸ್ ನರ್ಸಿಂಗ್ ಹೋಂ ಸಮೀಪ ಪುರಸಭೆಗೆ ಸೇರಿದ ಐದು ಮಳಿಗೆಗಳನ್ನು ೨೦೧೫ರಲ್ಲಿ ಹರಾಜು ಮಾಡಲಾಗಿದೆ. ಬಾಡಿಗೆ ಪಡೆದಿರುವ ಈ ಎಲ್ಲ ಮಳಿಗೆಗಳಲ್ಲೂ ತುಂಬು ವ್ಯವಹಾರ ನಡೆಯುತ್ತಿದೆ. ಆದರೆ, ಬಾಡಿಗೆ ಪಡೆದ ದಿನದಿಂದ ಇಂದಿನವರಗೆ ಸರಿಯಾದ ಬಾಡಿಗೆಯನ್ನೇ ಇಲ್ಲಿನ ವರ್ತಕರು ನೀಡುತ್ತಿಲ್ಲ. ಬಾಡಿಗೆ ವಸೂಲಾತಿಗೆ ಹೋಗುವ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಕರೆಮಾಡಿಸುತ್ತಾರೆ ಎಂಬ ದೂರಿದ್ದು ಇಲ್ಲಿನ ಐದು ಮಳಿಗೆಗಳ ಪೈಕಿ ಮಳಿಗೆ ನಂಬರ್ ಒಂದರ ಬಾಕಿ ಬಾಡಿಗೆ ೨.೨೫ ಲಕ್ಷ ರು. ಗಳಾದರೆ ಸಂಖ್ಯೆ ಎರಡರ ಮಳಿಗೆಯ ಬಾಡಿಗೆ ಬಾಕಿ ೩.೨೭ ಲಕ್ಷ ಮಳಿಗೆ ಸಂಖ್ಯೆ ಮೂರರ ಬಾಕಿ ಬಾಡಿಗೆ ೩,೪೫ ಲಕ್ಷ ರು. ಗಳಾಗಿದೆ. ಮಳಿಗೆ ಸಂಖ್ಯೆ ೪ರ ಬಾಡಿಗೆ ಬಾಕಿ ೬,೨೯ ಲಕ್ಷ ರು.ಗಳು ಹಾಗೂ ಮಳಿಗೆ ಸಂಖ್ಯೆ ೫ರ ಬಾಡಿಗೆ ಬಾಕಿ ೪,೮೮ ಲಕ್ಷ ರು. ಗಳಾಗಿದೆ. ಇಷ್ಟೊಂದು ಬಾಡಿಗೆ ಬಾಕಿ ಇದ್ದರು ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತರುವ ಹಿಂದೆ ಬಾರಿ ರಾಜಕೀಯ ಕೈವಾಡವಿದೆ ಎನ್ನಲಾಗುತ್ತಿದೆ.

*ಹೇಳಿಕೆ1

ಬಾಡಿಗೆ ಬಾಕಿ ಉಳಿಸಿಕೊಂಡಿರುವ ಬಹುತೇಕ ಮಳಿಗೆಗಳು ಮಾಜಿ ಪುರಸಭೆ ಸದಸ್ಯರದ್ದಾಗಿದೆ. ಪ್ರಭಾವಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಉಮೇಶ್, ಹೋರಾಟಗಾರ ಸಕಲೇಶಪುರ

*ಹೇಳಿಕೆ 2

ವಾಣಿಜ್ಯ ಮಳಿಗೆಳಿಂದ ಬಾಡಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಹಲವು ಮಳಿಗೆಗಳ ಬಾಡಿಗೆ ಬಾಕಿ ಸಾಕಷ್ಟು ಉಳಿದಿದೆ. ಮುಂದಿನ ದಿನಗಳಲ್ಲಿ ಈ ವರ್ತಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಮಹೇಶ್ವರಪ್ಪ, ಮುಖ್ಯಾಧಿಕಾರಿ ಪುರಸಭೆ=====

ಫೋಟೋ ಶೀರ್ಷಿಕೆ

೧೮ ಎಸ್‌ಕೆಪಿಪಿ ೧ ಪಟ್ಟಣದ ಹೇಮಾವತಿ ವಾಣಿಜ್ಯ ಮಳಿಗೆಯನ್ನು ನೆಲಸಮಗೊಳಿಸಲು ಆದೇಶವಿದ್ದರು ಯಾವುದೇ ಬಾಡಿಗೆ ಸಂದಾಯ ಮಾಡದೆ ವಹಿವಾಟು ನಡೆಸುತ್ತಿರುವ ವರ್ತಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಿ
ಚಿಕನ್ ಕಂಪನಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ