ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಅರಸೀಕೆರೆ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ನಗರದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯದ್ವಾರದಿಂದ ಆರಂಭವಾದ ರ‍್ಯಾಲಿ ಗೆ ಚಾಲನೆ ನೀಡಿ ಮಾತನಾಡಿದ ಜಗದೀಶ್ ಅಣ್ಣಯ್ಯ, ಛಾಯಾಗ್ರಹಣವು ಸುಮಾರು 185 ವರ್ಷಗಳ ಇತಿಹಾಸ ಹೊಂದಿರುವ ಕಲೆಯಾಗಿದ್ದು, ಪ್ರತಿವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಛಾಯಾಗ್ರಾಹಕರು ಕಲೆ, ಸೃಜನಶೀಲತೆ ಹಾಗೂ ವೃತ್ತಿಪರ ಸೇವೆಯ ಮೂಲಕ ಸಮಾಜದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿವಿಧ ಸವಾಲುಗಳ ನಡುವೆಯೂ ವೃತ್ತಿಯನ್ನು ಮುಂದುವರಿಸುತ್ತಿರುವ ಛಾಯಾಗ್ರಾಹಕರ ಹಿತಾಸಕ್ತಿಗಾಗಿ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘ ಸ್ಥಾಪನೆಯಾಗಿ 12 ವರ್ಷಗಳಾಗಿದ್ದು, ಹಿರಿಯರು ಹಾಗೂ ಕಿರಿಯರ ಸಹಕಾರದಿಂದ ಸಂಘಟನೆ ಮತ್ತಷ್ಟು ಬಲಿಷ್ಠವಾಗಿದೆ ಎಂದು ತಿಳಿಸಿದರು.ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸಚಿವರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಅವರನ್ನು ಭೇಟಿಯಾಗಿ ಅಭಿನಂದಿಸಲಾಗಿದೆ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವಿ. ಅರುಣ್ ಕುಮಾರ್ ಮಾತನಾಡಿ, ಛಾಯಾಗ್ರಾಹಕರು ಕೇವಲ ಮದುವೆ ಹಾಗೂ ಸಭೆ ಸಮಾರಂಭಗಳ ಕ್ಷಣಗಳನ್ನು ದಾಖಲಿಸುವವರಲ್ಲ. ವ್ಯಕ್ತಿಯ ಜೀವನದ ಅಮೂಲ್ಯ ನೆನಪುಗಳನ್ನು ಮುಂದಿನ ಪೀಳಿಗೆಗೂ ಉಳಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದರು. 1839ರಲ್ಲಿ ಫ್ರಾನ್ಸ್‌ನಲ್ಲಿ ಲೂಯಿಸ್ ಡಾಗ್ಯುರೆ ಮತ್ತು ಜೋಸೆಫ್ ನೈಸ್‌ಫೋರ್ ನಿಪ್ಸ್ ಅವರು ಡಾಗ್ಯುರಿಯೋಟೈಪ್ ಛಾಯಾಗ್ರಹಣ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಮೂಲಕ ಆಧುನಿಕ ಛಾಯಾಗ್ರಹಣಕ್ಕೆ ಹೊಸ ದಿಕ್ಕು ನೀಡಿದರು. ಇಂದಿನ ಡಿಜಿಟಲ್ ಯುಗದಲ್ಲಿಯೂ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮದ ಮಹತ್ವ ಕಡಿಮೆಯಾಗಿಲ್ಲ ಎಂದು ಹೇಳಿದರು.ಛಾಯಾಗ್ರಾಹಕರು ತಮ್ಮ ವೃತ್ತಿಯ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಂಘದ ಸದಸ್ಯರು ಹಾಗೂ ಅವರ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಸಂಘದಿಂದ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದು ಅರುಣ್ ಕುಮಾರ್ ತಿಳಿಸಿದರು. ರ‍್ಯಾಲಿಯು ಕೃಷಿ ಮಾರುಕಟ್ಟೆಯ ಮುಖ್ಯ ದ್ವಾರದಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪಿ.ಪಿ. ವೃತ್ತ ತಲುಪಿತು. ಈ ವೇಳೆ ಛಾಯಾಗ್ರಾಹಕರು ಪರಸ್ಪರ ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಖಜಾಂಚಿ ಸತೀಶ್, ಕಾರ್ಯಕಾರಿಣಿ ಸದಸ್ಯರಾದ ಬೈರೇಶ್, ರಮೇಶ್, ವಿರೂಪಾಕ್ಷ, ಜಯರಾಂ, ವಿಜಯಕುಮಾರ್, ಧನಂಜಯ, ಯೋಗೀಶ್, ಅಶೋಕ್ ಹಾಗೂ ಹಿರಿಯ ಸದಸ್ಯರಾದ ಗೋವಿಂದರಾಜು ನಾಯ್ಡು, ರಂಗನಾಥ್, ಪ್ರಸನ್ನಕುಮಾರ್, ವಿನೋದ್ ನಾಯ್ಡು, ಪ್ರಕಾಶ್ ತಗ್ಗಿನಮನಿ, ಬಿ.ವಿ. ವೇಣುಗೋಪಾಲ ನಾಯ್ಡು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.