- ವರಿಷ್ಠರೊಂದಿಗೆ ಮಾತುಕತೆಯ ನಂತರ ನಿರ್ಧಾರ: ಸಂಗಣ್ಣ ಕರಡಿ
ಸಂಸದ ಸಂಗಣ್ಣ ಕರಡಿ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ರಾಜ್ಯ ನಾಯಕರೊಂದಿಗೆ ಸಮಯ ನಿಗದಿ ಮಾಡಿ, ಸಮಸ್ಯೆ ಇತ್ಯರ್ಥ ಮಾಡಲು ಮಾತುಕತೆ ಮಾಡಿಸಲಾಗುವುದು ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ ಹೇಳಿದರು.
ಕರಡಿ ಅವರೊಂದಿಗೆ ಅವರ ನಿವಾಸದಲ್ಲಿ ಸಂಧಾನ ನಡೆಸಿದ ಬಳಿಕ ತಡರಾತ್ರಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ನೋವಾಗಿದೆ. ಆದರೂ ಸಹ ಅವರು ಪಕ್ಷಕ್ಕ ಮುಜುಗರವಾಗುವ ರೀತಿಯಲ್ಲಿ ಮಾತನಾಡಿಲ್ಲ. ಬದಲಾಗಿ ದೇಶದ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಹೀಗಾಗಿ, ಅವರಿಗೆ ಪಕ್ಷಗ ಬಗ್ಗೆ ಅಪಾರ ಗೌರವ ಇದೆ. ಜಿಲ್ಲೆಯಲ್ಲಿ ಪಕ್ಷ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಅವರಿಗೆ ಟಿಕೆಟ್ ಸಿಗದಿರುವುದರಿಂದ ಆಗಿರುವ ನೋವಿನ ಕುರಿತು ನಾಳೆ, ನಾಡಿದ್ದು ಪಕ್ಷದ ವರಿಷ್ಠರ ಜೊತೆಗೆ ಅವರೊಂದಿಗೆ ಮಾತುಕತೆಯಾಡುತ್ತೇವೆ. ಎಲ್ಲ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಮತ್ತು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನೂರಕ್ಕೆ ನೂರು ಗೆಲ್ಲಿಸುತ್ತೇವೆ ಎಂದರು.
ಮಾತುಕತೆ ಮಾಡಿ ಮುಂದಿನ ತೀರ್ಮಾನ:
ಸಂಧಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಲೇ ಏನು ಹೇಳುವುದಿಲ್ಲ, ವರಿಷ್ಠರೊಂದಿಗೆ ಮಾತುಕತೆಯಾಡುತ್ತೇನೆ, ಅಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ಖಂಡಿತ ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಮನವೊಲಿಸಲು ಗುರುವಾರ ವಿಧಾನಪರಿಷತ್‌ನ ವಿರೋಧ ಮುಖ್ಯಸಚೇತಕ ಎನ್. ರವಿಕುಮಾರ ಕರಡಿ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಈ ವೇಳೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಶರಣು ತಳ್ಳಿಕೇರಿ ಸೇರಿದಂತೆ ಮೊದಲಾದವರಿದ್ದರು.