ಹಾಸನದಲ್ಲಿ ಬಿಡುಗಡೆಯಾಗಲಿದೆ ಸಂಸದ ಪ್ರಜ್ವಲ್ ಸಾಧನೆಯ ಕಿರು ಪುಸ್ತಕ

KannadaprabhaNewsNetwork |  
Published : Mar 06, 2024, 02:16 AM IST
5ಎಚ್ಎಸ್ಎನ್21 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್‌.ಕೆ.ಕುಮಾರಸ್ವಾಮಿ. | Kannada Prabha

ಸಾರಾಂಶ

ಲೋಕಸಭೆ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಸಾಧನಾ ಕಿರು ಪುಸ್ತಕವನ್ನು ಮಾ.೬ ರ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇವೇಗೌಡರಿಂದ ಮೊಮ್ಮಗನ ಸಾಧನೆಗಳ ಪುಸ್ತಕ ಲೋಕಾರ್ಪಣೆ । ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾಹಿತಿಕನ್ನಡಪ್ರಭ ವಾರ್ತೆ ಹಾಸನ

ಲೋಕಸಭೆ ಸದಸ್ಯ ಪ್ರಜ್ವಲ್ ರೇವಣ್ಣ ತಮ್ಮ ಐದು ವರ್ಷದ ಅವಧಿಯಲ್ಲಿ ಏನೇನು ಸಾಧನೆ ಮಾಡಿದ್ದಾರೆ ಎಂಬುದರ ಕುರಿತು ಸಾಧನಾ ಕಿರು ಪುಸ್ತಕವನ್ನು ಮಾ.೬ ರ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಗರದ ಬಿ.ಎಂ.ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸಂಜೆ ೪ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಧನಾ ಪುಸ್ತಕ ಅನಾವರಣವನ್ನು ಎಚ್.ಡಿ. ದೇವೇಗೌಡ ನಡೆಸಿಕೊಡಲಿದ್ದಾರೆ. ಪ್ರಜ್ವಲ್ ಕೇಂದ್ರದಿಂದ ರೈಲ್ವೆ ಹಾಗೂ ಹೆದ್ದಾರಿ ಮೇಲ್ಸೇತುವೆ ಹಾಗೂ ಹೊಸ ಹೆದ್ದಾರಿ ಕಾಮಗಾರಿಗಳಿಗೆ ಅನುದಾನ ತರುವುದರ ಜತೆಗೆ ಜಿಲ್ಲೆಗೆ ಏನೆಲ್ಲಾ ಮಾಡಿದ್ದಾರೆ ಎಂಬುದು ಪುಸ್ತಕದಲ್ಲಿ ಇರಲಿದೆ ಎಂದು ತಿಳಿಸಿದರು.

ಜೆಡಿಎಸ್-ಬಿಜೆಪಿ ಒಪ್ಪಿಗೆಯಂತೆ ಹೊಂದಾಣಿಕೆ

‘ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಂತೆಯೇ ತೀರ್ಮಾನ ಆಗಿದೆ. ಎರಡೂ ಪಕ್ಷಗಳ ನಾಯಕರು ಈಗಾಗಲೇ ಒಪ್ಪಿ ಆಗಿದೆ. ನಮಗೆ ಎಷ್ಟು ಸೀಟು ಹಂಚಿಕೆ ಎಂಬುದಷ್ಟೇ ಬಾಕಿ ಇದೆ. ಲೋಕಸಭಾ ಚುನಾವಣೆ ಫಲಿತಾಂಶ ಆಧರಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಕೆ ಬಗ್ಗೆ ನಿರ್ಧಾರ ಆಗಲಿದೆ. ಲೋಕಸಭೆ ಚುನಾವಣೆಗೆ ನಾನು, ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ಉಸ್ತುವಾರಿ ಆಗಿದ್ದೇವೆ. ಶೀಘ್ರವೇ ಪಕ್ಷದ ವಿವಿಧ ಘಟಕಗಳನ್ನು ಪುನರ್ ರಚಿಸಿ ಸಂಘಟನೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಮಾಡಲಾಗುವುದು’ ಎಂದು ಹೇಳಿದರು.

ಇತ್ತೀಚೆಗೆ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ೧೩೪೪ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿರುವುದು ಸ್ವಾಗತಾರ್ಹ. ಆದರೆ ಯಾವ ಇಲಾಖೆಯ ಕಾಮಗಾರಿ ಇದರಲ್ಲಿ ಸೇರಿವೆ, ಅಂದಾಜು ವೆಚ್ಚ ಎಷ್ಟು, ಯೋಜನೆ ಯಾವುದು ಎಂಬುದನ್ನು ಜಿಲ್ಲಾಡಳಿತ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಆಲೂರಿನಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಮುಗಿದೇ ಇಲ್ಲ. ಆದರೂ ಉದ್ಘಾಟಿಸಲಾಗಿದೆ. ಸಮಾವೇಶದಲ್ಲಿ ೭೦೦ ಬಸ್‌ಗಳಲ್ಲಿ ಜನರನ್ನು ಕರೆ ತರಲಾಗಿತ್ತು. ಎಷ್ಟೋ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಮಾಡಿರುವುದರ ಹಿಂದೆ ಲೋಕಸಭೆ ಚುನಾವಣೆ ಉದ್ದೇಶ ಅಡಗಿದೆ ಎಂದು ಆರೋಪಿಸಿದರು.

‘ಕುಡಿಯುವ ನೀರಿಗೆ ಹಣ ನೀಡಿದ್ದೇವೆ ಅಂತಾರೆ, ಹಣ ಎಲ್ಲಿದೆ, ಹೊಸ ಕೊಳವೆ ಬಾವಿ ಕೊರೆಯುವ ಹಾಗಿಲ್ಲ. ಯುವ ನಿಧಿಯಡಿ ನಿರುದ್ಯೋಗ ಭತ್ಯೆಯನ್ನು ಎಲ್ಲರಿಗೂ ನೀಡಬೇಕು. ಇಲ್ಲವಾದರೆ ಖಾಲಿ ಇರುವ ನಾಲ್ಕೂವರೆ ಲಕ್ಷ ಹುದ್ದೆ ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಅಕ್ಟರ್, ಗಿರೀಶ್ ಇದ್ದರು.ಹಾಸನದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್‌.ಕೆ.ಕುಮಾರಸ್ವಾಮಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ