ಮತದಾನ ಜಾಗೃತಿ ಕಾರ್ಯಕ್ರಮ ಚುರುಕಿಗೆ ಸೂಚನೆ

KannadaprabhaNewsNetwork | Published : Mar 6, 2024 2:16 AM

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಿಸಲು ಜಿಲ್ಲೆಯಾದ್ಯಂತ ಮತದಾನ ಜಾಗೃತಿಯ ಹಲವು ವಿಭಿನ್ನ, ವಿನೂತನ ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯ ಹಂತದಲ್ಲಿ ಹಮ್ಮಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚುನಾವಣಾ ಆಯೋಗವು ಸ್ವೀಪ್ ಚಟುವಟಿಕೆಗಳ ಘೋಷಣೆಯಾಗಿ “ಚುನಾವಣಾ ಪರ್ವ ದೇಶದ ಗರ್ವ” ಎಂಬ ವಾಕ್ಯವನ್ನು ಈ ಬಾರಿ ಆಯ್ಕೆ ಮಾಡಿದೆ. ಅದರಂತೆ ಜಿಲ್ಲೆಯ ಜನರು ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ, ಮತದಾನದಲ್ಲಿ ಭಾಗವಹಿಸಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಮನವಿ ಮಾಡಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಕಚೇರಿಯ ಹೆಚ್. ನರಸಿಂಹಯ್ಯ ಸಭಾಂಗಣದಲ್ಲಿ ನಡೆದ ಮತದಾರರಿಗೆ ಮತದಾನ ಕುರಿತು ಶಿಕ್ಷಣ ನೀಡುವ ಸ್ವೀಪ್ ಚಟುವಟಿಕೆಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಯಾವುದೇ ಕ್ಷಣದಲ್ಲಿ ಘೋಷಣೆ ಆಗಬಹುದು. ಆದ್ದರಿಂದ ನಿರಂತರವಾಗಿ ಕೈಗೊಳ್ಳುತ್ತಿರುವ ಚುನಾವಣಾ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಮತದಾನದ ಅರಿವು ಮೂಡಿಸಿ

ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಿಸಲು ಜಿಲ್ಲೆಯಾದ್ಯಂತ ಮತದಾನ ಜಾಗೃತಿಯ ಹಲವು ವಿಭಿನ್ನ, ವಿನೂತನ ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯ ಹಂತದಲ್ಲಿ ಹಮ್ಮಿಕೊಳ್ಳಬೇಕು. ಜಾಗೃತಿಗಾಗಿ ಬೇಕಾಗುವ ಕತಪತ್ರ, ಬಿತ್ತಿಪತ್ರ, ಪೋಸ್ಟರ್ ಗಳು, ಬ್ಯಾನರ್ ಗಳನ್ನು ಸಿದ್ದಪಡಿಸಿಕೊಳ್ಳಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ಟಿಕೆಟ್ ಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ನೋಂದಣಿ ಸ್ಲಿಪ್ ಗಳಲ್ಲಿ, ಕೋಚಿಮುಲ್ ಉತ್ಪನ್ನಗಳ ಮೇಲೆ, ಇಲಾಖೆಗಳ ಸಾಮಾಜಿಕ ಜಾಲತಾಣಗಳು, ವೆಬ್ ಸೈಟ್ ಗಳಲ್ಲಿ ಮತದಾನದ ಜಾಗೃತಿಯ ಟ್ಯಾಗ್ ಲೈನ್ ಬಳಸಿಕೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ೨೦೧೪ರ ಚುನಾವಣೆಯಲ್ಲಿ ಶೇ. ೭೮.೨ ರಷ್ಟು ಮತ್ತು ೨೦೧೯ರಲ್ಲಿ ಶೇ. ೭೮.೦೪ ರಷ್ಟು ಮತದಾನ ಪ್ರಮಾಣವನ್ನು ದಾಖಲಿಸಿ ಉತ್ತಮ ಸಾಧನೆಯನ್ನು ಮಾಡಿ ರಾಜ್ಯದಲ್ಲಿ ಗಮನ ಸೆಳೆದಿತ್ತು ಎಂದು ನೆನಪಿಸಿದರು. ಮಕ್ಕಳ ಮೂಲಕ ಪೋಷಕರಿಗೆ ಮಾಹಿತಿ

ಪ್ರತಿ ಶಾಲಾ ಕಾಲೇಜುಗಳಲ್ಲಿ ಇ.ಎಲ್.ಸಿ ಕ್ಲಬ್ ಗಳನ್ನು ರಚಿಸಿ ಮಕ್ಕಳಿಂದ ಅವರ ಪೋಷಕರಿಗೆ ಮತದಾನದ ಅರಿವು ಮೂಡಿಸುವ ಕೆಲಸ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಗಳ ಮಕ್ಕಳಿಂದ ಪೋಷಕರಿಗೆ ಚುನಾವಣೆಯ ಮಹತ್ವದ ಬಗ್ಗೆ ತಿಳಿಸಿ, ಮತ ಚಲಾಯಿಸುವಂತೆ ಪೋಷಕರಿಗೆ ಪತ್ರ ಬರೆಸಬೇಕು. ಪ್ರತಿ ಗ್ರಾಮಗಳಲ್ಲಿ, ವಾರ್ಡ್ ಗಳಲ್ಲಿ ಘನತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಜಾಗೃತಿ ಜಿಂಗಲ್ಸ್ ಗಳನ್ನು ಬಿತ್ತರಿಸಬೇಕು ಎಂದರು.

ಥೀಮ್ ಆಧಾರಿತ ಮತಗಟ್ಟೆ ಕಳೆದ ವಿಧಾನಸಭೆ, ಚುನಾವಣೆ ವೇಳೆ ಜಿಲ್ಲೆಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ೯ ವಿಶೇಷ ಮತಗಟ್ಟೆಗಳನ್ನು ರಚಿಸಿ ಮತದಾರರ ಗಮನ ಸೆಳೆಯುವ ಮೂಲಕ ಶೇ. ೮೫ ರಷ್ಟು ಮತದಾನವನ್ನು ಜಿಲ್ಲೆಯಲ್ಲಿ ದಾಖಲಿಸಲಾಗಿತ್ತು. ಈ ವಿಶೇಷ ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ, ಯುವ ಮತಗಟ್ಟೆ, ಸಾಂಪ್ರದಾಯಿಕ ಮಾದರಿ ಮತಗಟ್ಟೆ ಮತ್ತು ಜಿಲ್ಲೆಯ ವಿಶೇಷತೆಯನ್ನು ಬಿಂಬಿಸುವ ಥೀಮ್ ಆಧಾರಿತ ಮತಗಟ್ಟೆಗಳನ್ನು ರಚಿಸಲಾಗಿತ್ತು. ನಮ್ಮ ಜಿಲ್ಲೆಯ ಥೀಮ್ ಆಧಾರಿತ ಮತ್ತು ಸಖಿ ಮತಗಟ್ಟೆಗಳು ಆಕರ್ಷಕವಾಗಿ ಮೂಡಿ ಬಂದು ಜನರನ್ನು ಸೆಳೆದಿದ್ದವು, ಅದೇ ರೀತಿ ಈ ಬಾರಿಯು ಸಕಲ ಸಿದ್ದತೆಗಳನ್ನು ಮಾಡಿಕೊಂಡು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ತರಬೇತಿದಾರರಾದ ಪಿ.ಎಲ್.ಸತೀಶ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Share this article