ಲಿಂಗದಬೈಲ್ ಸಿದ್ದಿ ಹೋಂ ಸ್ಟೇ ಉದ್ಘಾಟನೆ

KannadaprabhaNewsNetwork | Published : Mar 6, 2024 2:16 AM

ಸಾರಾಂಶ

ಅರಣ್ಯ ಪ್ರದೇಶಗಳಲ್ಲಿ ಸತತ ವಾಸ್ತವ್ಯ ಮಾಡುವ ಸಿದ್ದಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರದ ಆರ್ಥಿಕ ನೆರವಿನಲ್ಲಿ ಉದ್ಯೋಗ ಸೃಷ್ಟಿಸಿ, ಅವರ ಬದುಕಿಗೆ ಆಶಾಕಿರಣದಂತೆ ಹೋಂ ಸ್ಟೇ ನಿರ್ಮಿಸಿರುವುದು ಮಹತ್ವದ್ದಾಗಿದೆ.

ಯಲ್ಲಾಪುರ:

ಅರಣ್ಯ ಪ್ರದೇಶಗಳಲ್ಲಿ ಸತತ ವಾಸ್ತವ್ಯ ಮಾಡುವ ಸಿದ್ದಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರದ ಆರ್ಥಿಕ ನೆರವಿನಲ್ಲಿ ಉದ್ಯೋಗ ಸೃಷ್ಟಿಸಿ, ಅವರ ಬದುಕಿಗೆ ಆಶಾಕಿರಣದಂತೆ ಹೋಂ ಸ್ಟೇ ನಿರ್ಮಿಸಿರುವುದು ಮಹತ್ವದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಸನಗದ್ದೆ ಲಿಂಗದಬೈಲ್ ಬಳಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಜಿಪಂ, ತಾಪಂ ಸಹಯೋಗದಲ್ಲಿ ನಿರ್ಮಿಸಲಾದ ಡಮಾಮಿ ಸಿದ್ದಿ ಸಮುದಾಯ ಭವನ ಪ್ರವಾಸೋದ್ಯಮ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಆಸಕ್ತಿ ವಹಿಸಿ ಸುಂದರ ಕಟ್ಟಡ ನಿರ್ಮಿಸಿದ್ದಾರೆ. ಇದನ್ನು ಸಿದ್ದಿ ಸಮುದಾಯದ ಜನರು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರೀತಿಯಿಂದ, ಸೌಜನ್ಯದಿಂದ ಉತ್ತಮ ಸೇವೆ ನೀಡಿ, ಅವರ ಮೆಚ್ಚುಗೆಗೆ ಪಾತ್ರವಾಗುವಂತೆ ಕಾರ್ಯನಿರ್ವಹಿಸಬೇಕು. ಬೆಂಗಳೂರಿನಂತಹ ಮಹಾನಗರದಲ್ಲಿ ಇದ್ದವರು ಇಲ್ಲಿಯ ಉತ್ತಮ ಸೇವೆ ಕಂಡು ಉಳಿದವರಿಗೂ ಪ್ರೇರಣೆಯಾಗುವಂತಹ ನಡವಳಿಕೆ ನಿರ್ಮಾಣವಾಗಬೇಕು. ಅಂದಾಗ ಮಾತ್ರ ಸರ್ಕಾರದ ಯೋಜನೆ-ಯೋಚನೆ ಸಾಫಲ್ಯಗೊಳ್ಳುತ್ತದೆ ಎಂದ ಅವರು, ಉತ್ತಮ ಕಾರ್ಯಗಳ ಆರಂಭಕ್ಕೆ ವಿಘ್ನ ಸಹಜ. ಎಂದೋ ಉದ್ಘಾಟನೆಗೊಳ್ಳಬೇಕಿದ್ದ ಈ ಕಾರ್ಯ ಕಾರಣಾಂತರದಿಂದ ಮುಂದೂಡಲ್ಪಟ್ಟಿತ್ತು. ಆದರೆ ಮುಂದಿನ ವಾರದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಬಹುದಾದ ಸಂಭವ ಇರುವುದರಿಂದ ತುರ್ತಾಗಿ ಚಾಲನೆ ನೀಡಲಾಯಿತು ಎಂದರು.ಕಟ್ಟಡದ ರೂಪುರೇಷೆ ವಿವರಿಸಿದ ಜಿಪಂ ಯೋಜನಾ ನಿದೇಶಕ ಮಂಜುನಾಥ ನಾವಿ, ಸಿದ್ದಿ ಸಮುದಾಯದ ಅಪರೂಪದ ಸಾಂಸ್ಕೃತಿಕ ಪ್ರತಿಭೆಗಳನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ಸಮುದಾಯ ಭವನ ನಿರ್ಮಿಸಲಾಗಿದೆ. ಇದನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವುದು ಸಮುದಾಯದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತಾಪಂ ಇಒ ಎನ್.ಆರ್. ಹೆಗಡೆ, ಡಮಾಮಿ ಸಿದ್ದಿ ಸಮುದಾಯದ ಸಂಜೀವಿನಿ ಸಂಘಟನೆ ಮುಖ್ಯಸ್ಥೆ ಸವಿತಾ ಸಿದ್ದಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಗ್ರಾಪಂ ಸದಸ್ಯ ವಿಶ್ವೇಶ್ವರ ಭಟ್ಟ ಏಕಾನ, ಸೀತಾರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಜೋಶಿ, ಸಂಜೀವಿನಿ ಪ್ರವಾಸೋದ್ಯಮ ಮುಖ್ಯಸ್ಥರಾದ ಲಲಿತಾ ಸಿದ್ದಿ, ವೀಣಾ ಸಿದ್ದಿ, ನಾಗವೇಣಿ ಸಿದ್ದಿ, ಗಣಪತಿ ಸಿದ್ದಿ, ಮಂಜುನಾಥ ಸಿದ್ದಿ ಉಪಸ್ಥಿತರಿದ್ದರು.

Share this article