ಧಾರವಾಡ: ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ'''' ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಅದೇ ರೀತಿ ಧಾರವಾಡದಲ್ಲೂ ಮೊದಲಿನಿಂದಲೂ ನವರಾತ್ರಿ ಹಬ್ಬವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಜಂಬೂ ಸವಾರಿ
ಗುರುರಾಜ ಹುಣಸಿಮರದ ಅವರ ನೇತೃತ್ವದಲ್ಲಿ ಧಾರವಾಡ ಜಂಬೂ ಸವಾರಿ ಉತ್ಸವವನ್ನು ಎರಡು ದಶಕಗಳಿಂದ ನೆರವೇರಿಸಲಾಗುತ್ತಿದೆ. ಒಂಭತ್ತು ದಿನಗಳ ಕಾಲ ಗಾಂಧಿ ನಗರ ಬಂಡೆಮ್ಮ ದೇವಸ್ಥಾನದಲ್ಲಿ ಪೂಜೆಗಳು ನಡೆಯಲಿವೆ. ಈ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿರುತ್ತದೆ. ವಿಜಯ ದಶಮಿ ದಿನ ಅಲ್ಲಿಂದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಕಲಾತಂಡಗಳೊಂದಿಗೆ ಮೆರವಣಿಗೆ ಕಲಾಭವನ ತಲುಪಿ ಅಂತ್ಯಗೊಳ್ಳಲಿದೆ.ಕರಿಯಮ್ಮ ಗುಡಿ
ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿ ನಿಕೇತನ ನಗರದ ಕರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅ. 3ರಿಂದ 12ರ ವರೆಗೆ ನಡೆಯಲಿದೆ. ಶ್ರೀ ಕರಿಯಮ್ಮ ದೇವಿಗೆ ಛತ್ರಪತಿ ಶಿವಾಜಿ ಮಹಾರಾಜರು ಸಹ ಭಕ್ತರಾಗಿದ್ದರು. ಇದು ಭಾವ್ಯೆಕ್ಯತೆಯ ಕೇಂದ್ರವೂ ಆಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷ ದೇವಿಗೆ 40 ತೊಲಿ ಬಂಗಾರದ ಕಿರೀಟ ನೀಡಿ ಭಕ್ತರು ಕೃತಾರ್ಥರಾಗಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಇಮ್ಮಡಿಯಾಗುತ್ತಿದೆ.ಒಂಭತ್ತು ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಉಪಹಾರ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ. ದೇವಿಗೆ ಅ. 3ರಂದು ರೇಣುಕಾ ಯಲ್ಲಮ್ಮ, 4ರಂದು ಗಾಯತ್ರಿ ದೇವಿ, 5ರಂದು ಪದ್ಮಾವತಿ, 6ರಂದು ಅಂಭಾ ಭವಾನಿ, 7ರಂದು ಮಹಾಗೌರಿ, 8ರಂದು ಅನ್ನಪೂರ್ಣೇಶ್ವರಿ, 9ರಂದು ಮಹಾಸರಸ್ವತಿ, 10ರಂದು ಶಾಖಾಂಬರಿ, 11ರಂದು ಮಹಾಲಕ್ಷ್ಮಿ, 12ರಂದು ಬಗಳಾಮುಖಿ ದೇವಿ ಅಲಂಕಾರ ಮಾಡಲಾಗುತ್ತದೆ. ಅಂದೇ ಸಂಜೆ 4.30ಕ್ಕೆ ದೇವಿಯ ಅಲಂಕೃತ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷರು, ಶಾಸಕ ಎನ್.ಎಚ್. ಕೋನರಡ್ಡಿ ಮನವಿ ತಿಳಿಸಿದ್ದಾರೆ.
ಹಬ್ಬದ ವಿಶೇಷವೇನು?ಈ ಹಬ್ಬ ಆಶ್ವೀಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ ಮಾಡುತ್ತಾರೆ. ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆ ಇರುತ್ತದೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾನ್ ಪರಿವರ್ತನೆ ಆಗುತ್ತದೆ. ಆ ದಿನ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ ಭೋಜನಾದಿಗಳನ್ನು ಮಾಡಿ ಅರ್ಪಿಸುತ್ತಾರೆ. ಆದ್ದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ಬಾರಿ ಅ. 2ರಂದು ಅದು ನಡೆಯುತ್ತಿದೆ. ಅ. 3ರಿಂದ ನವರಾತ್ರಿ ಹಬ್ಬ ಶುರುವಾಗಲಿದೆ.
ವಿಜಯದಶಮಿಯ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುತ್ತಾರೆ. `ಶಮಿ'''''''' ಎಂದರೆ ಶಾಂತಿ, ಸಮಾಧಾನವೆಂದರ್ಥ. ಆ ದಿನ ಬನ್ನಿ ಮರಕ್ಕೆ ಪೂಜಿಸುವುದರೊಂದಿಗೆ ಬನ್ನಿಮರದ ಎಲೆಗಳನ್ನು ಪರಸ್ಪರ ಕೊಟ್ಟು ನಾವು ನೀವು ಬನ್ನಿ ಕೊಟ್ಟು ಬಂಗಾರದಂಗ ಇರೋಣ ಎಂದು ಹಾರೈಸಲಾಗುತ್ತದೆ.