ಒತ್ತಡದ ಜೀವನ ಹೃದಯಕ್ಕೆ ಗಂಡಾಂತರ

KannadaprabhaNewsNetwork | Published : Nov 5, 2024 12:41 AM

ಸಾರಾಂಶ

ಜೈನ್ ಮಿಷನ್ ಆಸ್ಪತ್ರೆಯಲ್ಲಿ ನ 1 ರಿಂದ ಆರಂಭಗೊಂಡಿರುವ ಉಚಿತ ಡಯಾಲಿಸಿಸ್ ಸೌಲಭ್ಯ ದಾನಿಗಳ ನೆರವಿನೊಂದಿಗೆ ಕನಿಷ್ಠ ಮುಂದಿನ ಎರಡು ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಲಿದ್ದು ಪ್ರತಿದಿನ 30 ರಿಂದ 40 ಮಂದಿ ರೋಗಿಗಳಿಗೆ ಎಂದರು ಉಚಿತ ಡಯಾಲಿಸಿಸ್ ಸೌಲಭ್ಯ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದಲ್ಲಿ ಹೃದಯಾಘಾತ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ ಎಂದು ಯುಎಸ್ಎಯ ಖ್ಯಾತ ಹೃದಯ ತಜ್ಞ ಡಾ.ಜಸ್ಸುಪಟೇಲ್ ತಿಳಿಸಿದರು.

ನಗರ ಹೊರವಲಯದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಜೈನ್ ಮಿಷನ್ ಆಸ್ಪತ್ರೆ ಟ್ರಸ್, ರೋಟರಿ ಬೆಂಗಳೂರು ಬ್ರಿಗೇಡ್‌,ರೋಟರಿ ಬೈರೂಟ್ ಕಾಸ್ಮೋಪಾಲಿಟನ್, ರೋಟರಿ ಬ್ರಜೋ ಸ್ಪೋಟ್ ಹೌಸ್ ಟನ್ ಗಳ ಸಹಯೋಗದೊಂದಿಗೆ ಮೂರು ದಿನಗಳ ಉಚಿತ ಹೃದಯ ತಪಾಸಣಾ ಕಾರ್ಯಕ್ರಮ ಉಧ್ಘಾಟನೆ ಮತ್ತು ದಾನಿಗಳು ನೀಡಿದ ಉಪಕರಣ ಸ್ವೀಕರಿಸುವ ಸಮಾರಂಭದಲ್ಲಿ ಮಾತನಾಡಿದರು.

ಜಡ ಜೀವನಶೈಲಿ ಮಾರಕ

ಬದಲಾದ ಜೀವನಶೈಲಿ, ಒತ್ತಡದ ಜೀವನ, ದೈಹಿಕ ಶ್ರಮವಿಲ್ಲದ ದುಡಿಮೆ ಹೃದಯಕ್ಕೆ ಗಂಡಾಂತರ ತಂದೊಡ್ಡುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಒತ್ತಡ ಹೆಚ್ಚಾಗುತ್ತಿದೆ. ಒತ್ತಡ ಹೆಚ್ಚಾದಷ್ಟು ಹೃದಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.ಹೃದಯಾಘಾತದ ಮುನ್ಸೂಚನೆಯಲ್ಲೂ ವ್ಯತ್ಯಾಸಗಳಿರುತ್ತವೆ. ಕೆಲವೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಬ್ಬರಲ್ಲಿ ಲಘುವಾಗಿರುತ್ತವೆ. ವಿಶ್ರಾಂತಿ ರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದ ಜಡ ಜೀವನಶೈಲಿ, ಧೂಮಪಾನ, ಮದ್ಯಪಾನದಂಥ ಹವ್ಯಾಸಗಳು ಹೃದಯಾಘಾತ ಹೆಚ್ಚಲು ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು. ರೋಟರಿ ಗೌರ್ನರ್ ಎನ್.ಎಸ್.ಮಹದೇವ ಪ್ರಸಾದ್ ಮಾತನಾಡಿ, ಲಾಭ ರಹಿತ ಉಪಕ್ರಮದ ಧ್ಯೇಯದೊಂದಿಗೆ ನಿರ್ಮಾಣಗೊಂಡಿರುವ ಜೈನ್ ಮಿಷನ್ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಅಭಿನಂದನೆಗೆ ಪಾತ್ರವಾದ ವಿಷಯವಾಗಿದೆ ಈ ಆಸ್ಪತ್ರೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡಲು ರೋಟರಿ ಸಂಸ್ಥೆ ಸಿದ್ಧವಿದೆ ಎಂದರು. ದಿನವೂ ಉಚಿತ ಡಯಾಲಿಸಿಸ್‌

ಜೈನ್ ಮಿಷನ್ ಆಸ್ಪತ್ರೆ ಟ್ರಸ್ಟ್ ಅಧ್ಯಕ್ಷ ಡಾಕ್ಟರ್ ನರಪತ್ ಸೋಲಂಕಿ ಮಾತನಾಡಿ, ಈ ಆಸ್ಪತ್ರೆಯಲ್ಲಿ ನ 1 ರಿಂದ ಆರಂಭಗೊಂಡಿರುವ ಉಚಿತ ಡಯಾಲಿಸಿಸ್ ಸೌಲಭ್ಯ ದಾನಿಗಳ ನೆರವಿನೊಂದಿಗೆ ಕನಿಷ್ಠ ಮುಂದಿನ ಎರಡು ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಲಿದ್ದು ಪ್ರತಿದಿನ 30 ರಿಂದ 40 ಮಂದಿ ರೋಗಿಗಳಿಗೆ ಎಂದರು ಉಚಿತ ಡಯಾಲಿಸಿಸ್ ಸೌಲಭ್ಯ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಡಾ.ಜಿತೇಂದ್ರ ಮರ್ಡಿಯ, ರೋಟೋರಿಯನ್ ಸಾಂಬಮೂರ್ತಿ,ಜೈನ್ ಮಿಷನ್ ಆಸ್ಪತ್ರೆ ಟ್ರಸ್ಟ್ ಕಾರ್ಯದರ್ಶಿ ಉತ್ತಮ್ ಚಂದ್ ಜೈನ್,ವೈದ್ಯಕೀಯ ನಿರ್ಧೇಶಕ ಡಾ.ಬಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಜೈನ್ ಮತ್ತಿತರರು ಇದ್ದರು.

Share this article