ಸಾರ್ವಜನಿಕರ ಆಸ್ತಿ ಕಬಳಿಸಲು ವಕ್ಫ್ ಮಂಡಳಿ ಯತ್ನ

KannadaprabhaNewsNetwork | Published : Nov 5, 2024 12:41 AM

ಸಾರಾಂಶ

ರಾಜ್ಯಾದ್ಯಂತ ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ನೀಡಿರುವ ಎಲ್ಲ ನೊಟೀಸ್‌ಗಳನ್ನು ಸರ್ಕಾರ ಶೀಘ್ರವೇ ಹಿಂಪಡೆಯಲು ಆಗ್ರಹಿಸಿ ಬಿಜೆಪಿ ಮಂಡಲದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಾರಟಗಿಯಲ್ಲಿ ಬಿಜೆಪಿ ಮಂಡಲದ ಪದಾಧಿಕಾರಿಗಳ ಪ್ರತಿಭಟನೆ । ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಕಾರಟಗಿ

ರಾಜ್ಯಾದ್ಯಂತ ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ನೀಡಿರುವ ಎಲ್ಲ ನೊಟೀಸ್‌ಗಳನ್ನು ಸರ್ಕಾರ ಶೀಘ್ರವೇ ಹಿಂಪಡೆಯಲು ಆಗ್ರಹಿಸಿ ಬಿಜೆಪಿ ಮಂಡಲದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಸಾಮರಸ್ಯದ ನಾಡನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ರಾಜ್ಯದಲ್ಲಿ ಸಾರ್ವಜನಿಕರ ಆಸ್ತಿ ಕಬಳಿಸಲು ವಕ್ಫ್ ಮಂಡಳಿ ಮುಂದಾಗಿದೆ. ಏಕಾಏಕಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ಅನ್ನದಾತರ ಜಮೀನುಗಳಿಗೆ ನೊಟೀಸ್ ನೀಡಿದೆ. ಇದಕ್ಕೆಲ್ಲ‌ ಕಡಿವಾಣ ಹಾಕಬೇಕಿದ್ದ ಸರ್ಕಾರ, ಕೈಕಟ್ಟಿ ಕುಳಿತಿದೆ. ರಾಜ್ಯದ ವಿಜಯಪುರ, ಬೆಂಗಳೂರು, ಹಾವೇರಿ, ಕೊಪ್ಪಳ, ಕಲಬುರಗಿ ಸೇರಿ ಇತರೆ ಜಿಲ್ಲೆಗಳಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನು ವಕ್ಫ್ ಮಂಡಳಿ ಎಂದು ಪಹಣಿಯಲ್ಲಿ‌ ನಮೂದಿಸಲಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ವಕ್ಫ್ ಮಂಡಳಿಯ ಈ ಕ್ರಮಕ್ಕೆ ರಾಜ್ಯದಲ್ಲಿ ಸಾಮರಸ್ಯ ಭಾವನೆಗೆ ಧಕ್ಕೆ ಉಂಟಾಗಿದೆ. ಅನೇಕ ಕಡೆಗಳಲ್ಲಿ ಈ ನಿರ್ಧಾರವನ್ನು ಖಂಡಿಸಿ ರೈತರು ಬೀದಿಗಿಳಿದಿದ್ದಾರೆ. ಬಿಜೆಪಿಯೂ ಸಹ ರಾಜ್ಯವ್ಯಾಪಿ ಪ್ರತಿಭಟನೆಯ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರಿಕೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ರೈತರಿಗೆ ಮರಣ ಶಾಸನವಾಗಿ ಮಾರ್ಪಾಡಾಗಲಿದೆ. ಇತರೆ ಸಮುದಾಯಗಳ ಓಲೈಕೆ ರಾಜಕಾರಣ ಕಾಂಗ್ರೆಸ್ ಕೈ ಬಿಡಬೇಕು. ರಾಜ್ಯದಲ್ಲಿ ಅನ್ನದಾತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಯುವ ಮೋರ್ಚಾಧ್ಯಕ್ಷ ಮೌನೇಶ್ ದಢೇಸುಗೂರು, ಜಿಲ್ಲಾ ಕಾರ್ಯದರ್ಶಿ ಶಿವಶರಣೇಗೌಡ, ಮಹಿಳಾ ಅಧ್ಯಕ್ಷೆ ರತ್ನ ಕುಮಾರಿ, ತಾಲೂಕು ಮಂಡಲ ಸಂಚಾಲಕ ವೀರಭದ್ರಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯಾಂಕ ಪವಾರ್, ಪುರಸಭೆ ಸದಸ್ಯರಾದ ಫಕೀರಪ್ಪ ನಾಯಕ, ಆನಂದ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶರಣಬಸವರಡ್ಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೊಸ್ಕೇರಾ, ಮುಖಂಡರಾದ ಅಮರೇಶಪ್ಪ ಹುಳ್ಕಿಹಾಳ, ಈರಣ್ಣ ಬೇರ್ಗಿ, ದೇವರಾಜ ನಾಯಕ, ರವಿ ತಿಮ್ಮಾಪುರ, ಸುರೇಶ ರಾಠೋಡ, ಆದಿಲ್‌ ಪಾಷಾ ಇದ್ದರು.

Share this article