ನಾಟಕಗಳ ಒಡನಾಟದಿಂದ ಮಕ್ಕಳಿಗೆ ಮನೋಲ್ಲಾಸ

KannadaprabhaNewsNetwork | Published : Nov 5, 2024 12:41 AM

ಸಾರಾಂಶ

ಹಿರಿಯರಿಗೂ ಕಿರಿಯರಿಗೂ ನಾಟಕಗಳು ರಂಜನೆ ನೀಡುವುದರೊಂದಿಗೆ ಸಾಮಾಜಿಕ ಸಂದೇಶವನ್ನು ಕೊಡುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾಟಕಗಳ ಒಡನಾಟದಿಂದ ಮಕ್ಕಳಿಗೆ ಮನೋಲ್ಲಾಸ ದೊರಕುತ್ತದೆ. ಜೊತೆಗೆ ವಿವೇಕ ಮತ್ತು ವಿವೇಚನೆ ಬೆಳೆಸುತ್ತದೆ. ಆ ಮೂಲಕ ಮನೋವಿಕಾಸವನ್ನೂ ಉಂಟುಮಾಡುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಭಿಪ್ರಾಯಪಟ್ಟರು.ಅದಮ್ಯ ರಂಗಶಾಲೆ ಮತ್ತು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ನಗರದ ಕಿರು ರಂಗಮಂದಿರದಲ್ಲಿ ನಡೆದ ನಲಿಯಿತು ನವಿಲು'' ಮಕ್ಕಳ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಅವರು ಮಾತನಾಡಿ,

ಹಿರಿಯರಿಗೂ ಕಿರಿಯರಿಗೂ ನಾಟಕಗಳು ರಂಜನೆ ನೀಡುವುದರೊಂದಿಗೆ ಸಾಮಾಜಿಕ ಸಂದೇಶವನ್ನು ಕೊಡುತ್ತವೆ. ನಾಟಕದ ಪಾತ್ರಗಳು ಅಪಾರ ಪ್ರಭಾವ ಬೀರಿ ಮಾನಸಿಕ ಪರಿವರ್ತನೆಗೂ ಮೂಲವಾಗುತ್ತವೆ. ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿತ್ತುತ್ತವೆ ಎಂದು ಹೇಳಿದರು.ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ನಾಟಕಗಳಅಗತ್ಯವಿದೆ. ಆದ್ದರಿಂದ ಬಾಲ್ಯ ಕಾಲದಲ್ಲಿ ಮಕ್ಕಳಿಗೆ ಕಲೆ, ಸಾಹಿತ್ಯ, ನಾಟಕಗಳಪರಿಚಯಿಸಬೇಕು. ಆಗ ಮಕ್ಕಳುಬದುಕನ್ನು ಗ್ರಹಿಸಲು, ಸಮಸ್ಯೆಗಳನ್ನು ಎದುರಿಸಲು, ಮಾನವೀಯ ಸಂಬಂಧಗಳ ಮಹತ್ವ ಅರಿಯಲುಸಾಧ್ಯವಾಗುತ್ತದೆ ಎಂದರು.

ನಾಟಕ ಪ್ರದರ್ಶನ ಉದ್ಘಾಟಿಸಿದ ದೇವರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಂತಮಲ್ಲಪ್ಪ ಮಾತನಾಡಿ, ಇಂದಿನದ್ದು ಮೊಬೈಲ್ ಯುಗ. ಆದ್ದರಿಂದ ಮಕ್ಕಳೆಲ್ಲ ಮೊಬೈಲ್ ಚಟಕ್ಕೆ ತುತ್ತಾಗಿದ್ದಾರೆ. ಈ ಚಟದಿಂದ ಅವರನ್ನು ದೂರವಿರಿಸಲು ನಾಟಕಗಳು ಹೆಚ್ಚು ಸಹಕಾರಿಯಾಗಬಲ್ಲವು ಎಂದರು.

ಪೋಷಕರು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ನಾಟಕದ ಹವ್ಯಾಸ ಬೆಳೆಸಬೇಕು. ಹಾಗೆಯೇ ಶಿಕ್ಷಕರು ಕೂಡ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಗಡಿಸಬೇಕು. ಆಗ ಮಕ್ಕಳು ನಾಟಕದ ಪಾತ್ರಗಳ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಸಾಗುತ್ತಾರೆ ಎಂದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ಭಾಷಣ ಮಾಡಿದರು. ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಸಿ.ಜಿ. ಮೂರ್ತಿರಾವ್, ಅದಮ್ಯ ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಸಾಹಿತಿಗಳಾದ ನಾಗೇಂದ್ರ ಹೆಬ್ಬಾರ, ಬಸಪ್ಪ ಸಿ. ಸಾಲುಂಡಿ, ಪ್ರಕಾಶಕ ಹಾಲತಿ ಲೋಕೇಶ್ ಉಪಸ್ಥಿತರಿದ್ದರು. ಬಳಿಕ ವಿನೋದ ಸಿ. ಮೈಸೂರು ನಿರ್ದೇಶನದಲ್ಲಿ ನಡೆದ ''''''''ನಲಿಯಿತು ನವಿಲು'''''''' ಮಕ್ಕಳ ನಾಟಕ ಪ್ರದರ್ಶನ ಬಾಲ ಕಲಾವಿದರ ಅಭಿನಯದಲ್ಲಿ ಮನೋಜ್ಞವಾಗಿ ಮೂಡಿಬಂದಿತು.

Share this article