ಕನಕರ ಕುರಿತ ಸಾಹಿತ್ಯಿಕ ನೆಲೆಗಳ ಅಧ್ಯಯನ ಇಂದಿನ ಅಗತ್ಯ-ವೆಂಕಟೇಶ

KannadaprabhaNewsNetwork | Published : Jul 3, 2024 12:20 AM

ಸಾರಾಂಶ

ಕನಕದಾಸರ ಕೀರ್ತನೆಗಳು ಹಾಗೂ ಕಾವ್ಯ ಪ್ರಾಕಾರಗಳ ವಿಭಿನ್ನ ಸಾಹಿತ್ಯಿಕ ನೆಲೆಗಳ ಅಧ್ಯಯನ ಇಂದಿನ ಅಗತ್ಯ ಎಂದು ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಡೀನ್‌ ಪ್ರೊ. ಎಂ.ಎನ್. ವೆಂಕಟೇಶ್ ಅಭಿಪ್ರಾಯಪಟ್ಟರು.

ಹಾವೇರಿ: ಕನಕದಾಸರ ಕೀರ್ತನೆಗಳು ಹಾಗೂ ಕಾವ್ಯ ಪ್ರಾಕಾರಗಳ ವಿಭಿನ್ನ ಸಾಹಿತ್ಯಿಕ ನೆಲೆಗಳ ಅಧ್ಯಯನ ಇಂದಿನ ಅಗತ್ಯ ಎಂದು ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಡೀನ್‌ ಪ್ರೊ. ಎಂ.ಎನ್. ವೆಂಕಟೇಶ್ ಅಭಿಪ್ರಾಯಪಟ್ಟರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗವು ಉಡುಪಿಯ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ಆಯೋಜಿಸಿದ್ದ ಕನಕ ಚಿಂತನೆ, ಇಹ-ಪರ ಸಮನ್ವಯತೆ ಸೊಬಗು ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯ ಪ್ರತಿಪಾದನೆಗೆ ಕನಕದಾಸರು ಪಟ್ಟ ಶ್ರಮ ವರ್ಣನಾತೀತವಾದುದು. ವಿಜಯನಗರ ಅರಸರ ಕಾಲದಲ್ಲಿ ಕನ್ನಡದ ಪ್ರಸಿದ್ಧ ಕೀರ್ತನಕಾರರಾಗಿದ್ದ ಇವರು ಸರ್ವಸಮನ್ವಯತೆಯ ಹರಿಕಾರರಾಗಿ ಸಮಾಜದಲ್ಲಿ ಧಾರ್ಮಿಕತೆಯನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಭಕ್ತಿಯ ಮಾರ್ಗದಲ್ಲಿ ಭಗವಂತನನ್ನು ಕಾಣುವ ಮೌಲ್ಯವನ್ನು ವರ್ಧಿಸಿದ ಕನಕರು ಜನರಲ್ಲಿ ಜಾಗೃತಿಯನ್ನುಂಟು ಮಾಡುವುದರ ಮುಖೇನ ಹೊಸತನದ ಅನುಭವ ನೀಡಿದವರು. ವರ್ಣ-ಬೇಧಗಳನ್ನು ಅಳಿಸುವಲ್ಲಿ ಅರಸತ್ವವನ್ನು ಬಿಟ್ಟು ಭಕ್ತಿಮಾರ್ಗವನ್ನು ಹಿಡಿದಿದ್ದೇ ಇವರ ಬದುಕಿನ ಬಹುದೊಡ್ಡ ನಿದರ್ಶನವಾಗಿದೆ. ಭಕ್ತಿ-ಜ್ಞಾನಗಳ ಸಮನ್ವಯತೆ ಮತ್ತು ಸಾರ್ವಕಾಲಿಕ ಸತ್ಯದ ಬದುಕಿನ ಸ್ಪರ್ಷತೆಯನ್ನು ಕನಕ ಸಾಹಿತ್ಯದ ಮೂಲಕ ಗ್ರಹಿಸುವುದು ಮುಖ್ಯವಾಗಿದೆ ಎಂದರು. ಉಡುಪಿಯ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟ ಮಾತನಾಡಿ, ಕನಕದಾಸರ ವಾಕ್ಮಯದ ಕವಿಸಾರ ಭಾವವನ್ನು ಜನಮಾನಸಕ್ಕೆ ತರುವ ನಿಲುವಿನ ಸಾರ್ಥಕತೆ ವಿಚಾರ ಸಂಕಿರಣಗಳ ಮೂಲಕವಾಗಿ ಸಾಧ್ಯವಾಗಿದೆ. ಹದಿನಾರನೇ ಶತಮಾನದಲ್ಲಿಯೇ ವರ್ಣ ವ್ಯವಸ್ಥೆಯ ಕುರಿತು ಸಮರ ಸಾರಿದ ಕನಕದಾಸರು ಭಕ್ತಿ, ಕವಿತ್ವ, ಜ್ಞಾನ ಮತ್ತು ಸಂಗೀತ ಸಾಧನೆಗೆ ಜಾತಿ ಎಂದೂ ತೊಡಕಾಗದು ಎಂಬುದನ್ನು ಕನಕ ಚಿಂತನೆ ಸಮನ್ವಯಗೊಳಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ. ಸಿ. ಕೊಳ್ಳಿ ವಹಿಸಿದ್ದರು. ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಜಿ.ಎಚ್.ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಸ್. ಎಲ್. ಬಾಲೇಹೊಸೂರ, ಸದಸ್ಯ ಜೆ. ಎಸ್. ಅರಣಿ, ಉಡುಪಿಯ ಆರ್.ಆರ್.ಸಿಯ ಸಂಶೋಧನಾ ಸಹಾಯಕ ಡಾ. ಅರುಣ್ ಕುಮಾರ್, ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ, ಜಗನ್ನಾಥ್ ಗೇನಣ್ಣನವರ ಇದ್ದರು.

ಈ ಸಂದರ್ಭದಲ್ಲಿ ಬ್ಯಾಡಗಿ ಬಿಇಎಂಎಸ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಜಿ. ವೈದ್ಯ ಸಂಪಾದಿಸಿದ ವಚನ ದರ್ಶನ ಕೃತಿ ಬಿಡುಗಡೆಗೊಳಿಸಲಾಯಿತು. ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಎಫ್. ಹೊಸಮನಿ ಪ್ರಾಸ್ತಾವಿಕ ಹಾಗೂ ಕೃತಿ ಪರಿಚಯ ಮಾಡಿದರು. ಸಂಘಟನಾ ಕಾರ್ಯದರ್ಶಿ ಪ್ರೊ. ಶಮಂತಕುಮಾರ್ ಕೆ. ಎಸ್. ಪರಿಚಯಿಸಿದರು. ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಸಿದ್ಧೇಶ್ವರಯ್ಯ ಹುಣಸಿಕಟ್ಟಿಮಠ ವಂದಿಸಿದರು.

Share this article