ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ಮೂಲಕ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಗಣತಿ ನಡೆಸಲು ಪಾಲಿಕೆಯ ಶಿಕ್ಷಣ ವಿಭಾಗ ಮುಂದಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ನಗರ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು 2019ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸೆಂಟರ್ ಫಾರ್ ಇ ಗವರ್ನೆನ್ಸ್ ಇಲಾಖೆ ಅಭಿವೃದ್ಧಿ ಪಡಿಸಿರುವ ಆ್ಯಪ್ ಬಳಸಿಕೊಂಡು ಸರ್ವೆ ನಡೆಸುವಂತೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪಾಲಿಕೆ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದು, ಈ ಸಂಬಂಧ ಟೆಂಡರ್ ಕರೆಯಲಾಗಿದೆ.
ಸಮೀಕ್ಷೆ ಸ್ಥಳಗಳು:
ವಸತಿ ಪ್ರದೇಶ, ಕೈಗಾರಿಕಾ ಸ್ಥಳಗಳು, ಕೃಷಿ ಕಾರ್ಮಿಕರ ವಲಯ, ಕೊಳಗೇರಿ, ಬಸ್ ಮತ್ತು ರೈಲ್ವೆ ನಿಲ್ದಾಣ, ಧಾರ್ಮಿಕ ಕೇಂದ್ರ, ಅನಾಥಾಶ್ರಮ, ಬಂಧೀಖಾನೆ, ಕಟ್ಟಡ ನಿರ್ಮಾಣ ಸ್ಥಳ, ಆಸ್ಪತ್ರೆ, ಹೋಟೆಲ್, ಛತ್ರ, ಚಿತ್ರಮಂದಿರ, ಸಣ್ಣ ಕೈಗಾರಿಕೆಗಳಾದ ಇಟ್ಟಿಗೆ ತಯಾರಿಕಾ ಸ್ಥಳ, ಮಂಡಕ್ಕಿ ಭಟ್ಟಿಗಳು ಸೇರಿದಂತೆ ಮೊದಲಾದ ಪ್ರದೇಶದಲ್ಲಿ ಸಮೀಕ್ಷೆ ನಡೆಯಲಿದೆ.
ಗಾಂಧಿನಗರದಲ್ಲಿ ಪ್ರಾಯೋಗಿಕ ಸಮೀಕ್ಷೆ:
ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಪ್ರಾಯೋಗಿಕವಾಗಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಭಾಷ್‌ನಗರ ವಾರ್ಡ್‌ನಲ್ಲಿ ಸಮೀಕ್ಷೆಗೆ ನಡೆಸಲು ನಿರ್ಧರಿಸಲಾಗಿದೆ. ಈ ವಾರ್ಡ್‌ನಲ್ಲಿ ಸುಮಾರು 10 ಸಾವಿರ ಮನೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿ ದರ ಪಟ್ಟಿ ನೀಡುವಂತೆ ಪ್ರಕಟಣೆ ನೀಡಲಾಗಿದೆ. ಸಾಕಷ್ಟು ಸಂಸ್ಥೆಗಳು ಸರ್ವೆ ನಡೆಸಲು ಮುಂದೆ ಬಂದಿವೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
₹10 ನಿಗದಿ
ಸಮೀಕ್ಷೆ ನಡೆಸುವ ಸಂಘಕ್ಕೆ ಪ್ರತಿ ಮನೆ ಸಮೀಕ್ಷೆ ನಡೆಸುವುದಕ್ಕೆ ₹10 ನೀಡಲು ತೀರ್ಮಾನಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗುವ ಸದಸ್ಯರು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ಸಮೀಕ್ಷಾ ಕಾರ್ಯಕ್ಕೆ ಕನಿಷ್ಠ 30 ಸದಸ್ಯರನ್ನು ಹೊಂದಿರಬೇಕು. ಮಾಹಿತಿಯನ್ನು ಗೌಪ್ಯವಾಗಿಡಬೇಕು. ಸಮೀಕ್ಷೆದಾರರು ಸ್ಮಾರ್ಟ್ ಫೋನ್ ಬಳಸುವ ಜ್ಞಾನ ಹೊಂದಿರಬೇಕು ಎಂದು ಬಿಬಿಎಂಪಿ ಷರತ್ತು ವಿಧಿಸಿದೆ.ಬಾಕ್ಸ್...
ಪರಿಶೀಲಿಸಿ ಮುಂದಿನ ಸಮೀಕ್ಷೆ
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸಮೀಕ್ಷೆಯಲ್ಲಿ ಕಂಡು ಬರುವ ಸಮಸ್ಯೆ ಪರಿಹರಿಸಿಕೊಂಡು ಉಳಿದ ಎಲ್ಲ ವಾರ್ಡ್‌ನಲ್ಲಿ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸಮೀಕ್ಷೆ ನಡೆಸಲು ಟೆಂಡರ್ ಆಹ್ವಾನಿಸಲಾಗುವುದು. ಸುಮಾರು 30 ಲಕ್ಷ ಮನೆ ಸಮೀಕ್ಷೆ ನಡೆಸಲು ₹3 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.