ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸಕೆರೆಹಳ್ಳಿ ಸಮೀಪದ ದತ್ತಾತ್ರೇಯನಗರದ ನಿವಾಸಿ ಶ್ರೀನಿವಾಸ್ ಬಂಧಿತ. ₹19 ಲಕ್ಷ ಮೌಲ್ಯದ ಲೆನೋವಾ ಕಂಪನಿಯ 62 ಟ್ಯಾಬ್‌ಗಳು ಹಾಗೂ 2 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಜಯನಗರದ 2ನೇ ಹಂತದ ಬಿಬಿಎಂಪಿ ಆಸ್ಪತ್ರೆಯ ತಾತ್ಕಾಲಿಕ ದಸ್ತಾನು ಮಳಿಗೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಟ್ಯಾಬ್‌ಗಳು ಕಳ್ಳತನವಾಗಿದ್ದವು. ತನಿಖೆಗಿಳಿದ ಮೋಹನ್ ಡಿ.ಪಟೇಲ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನಾಗಿದ್ದ ಶ್ರೀನಿವಾಸ್‌ನನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.ಕೊರೋನಾ ಸಮಯದಲ್ಲಿ ಜಯನಗರದ ಬಿಬಿಎಂಪಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನಾಗಿ ಹೊರಗುತ್ತಿಗೆ ಆಧಾರದ ಮೇರೆಗೆ ಮೂರು ವರ್ಷ ಶ್ರೀನಿವಾಸ್ ಕೆಲಸ ಮಾಡಿದ್ದ. ಆ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಜತೆ ಆತನಿಗೆ ಆತ್ಮೀಯ ಒಡನಾಟ ಬೆಳೆಯಿತು. ಅದೇ ಸಮಯದಲ್ಲಿ ಆಸ್ಪತ್ರೆಯ ದಾಸ್ತಾನು ಕೇಂದ್ರದ ಬೀಗದ ಕೀಗಳನ್ನು ಆತ ನಕಲು ಮಾಡಿಕೊಂಡಿದ್ದ. ಇನ್ನು ಗುತ್ತಿಗೆ ಅವಧಿ ಮುಗಿದು ಆಸ್ಪತ್ರೆಯಲ್ಲಿ ಕೆಲಸ ತೊರೆದ ಬಳಿಕವು ವೈದ್ಯರು ಮತ್ತು ಸಿಬ್ಬಂದಿ ಜತೆ ಆತನ ಸಂಪರ್ಕ ಮುಂದುವರೆದಿತ್ತು. ಆಗಾಗ್ಗೆ ವೈದ್ಯರ ಕಾರುಗಳಿಗೆ ಆತನೇ ಚಾಲಕನಾಗಿ ಸಹ ಕೆಲಸ ಮಾಡುತ್ತಿದ್ದ.
ಪೊಲೀಸರಿಗೇ ಮಿಸ್‌ಕಾಲ್!
ಇರುಳಿನಲ್ಲಿ ಆಸ್ಪತ್ರೆಯಲ್ಲಿ ಓಡಾಡುವ ಮೊಬೈಲ್‌ನ ಟಾರ್ಚ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ತುರ್ತು ಕರೆ ಬಟನ್ ಅನ್ನು ಆತ ಒತ್ತಿದ್ದಾನೆ. ಆಗ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ 122)ಗೆ ಮಿಸ್ಡ್ ಕಾಲ್ ಆಗಿತ್ತು. ಈ ಮಾಹಿತಿ ಆಧರಿಸಿ ಶ್ರೀನಿವಾಸ್ ವಶಕ್ಕೆ ಪಡೆದು ವಿಚಾರಿಸಿದಾಗ ಹಣಕಾಸು ಸಮಸ್ಯೆಯಿಂದ ತಾನೇ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.