ಬಟ್ಟೆಗಳಿಗೆ ಹೊಸ ರೂಪ ನೀಡುವ ಟೈಲರ್‌ ಕೆಲಸ ಗೌರವಯುತ ವೃತ್ತಿ: ಸುಧಾಕರ್ ಶೆಟ್ಟಿ

KannadaprabhaNewsNetwork | Published : Feb 27, 2025 12:35 AM

ಸಾರಾಂಶ

ಪ್ರತಿಯೊಬ್ಬರೂ ಬಳಸುವ ಬಟ್ಟೆಗಳನ್ನು ಆಯಾ ಕಾಲಕ್ಕೆ ಕಾರ್ಯಕ್ರಮಗಳಿಗೆ ಧರಿಸಲು ಅನುಕೂಲವಾಗುವಂತೆ ಹೊಸ ರೂಪ ನೀಡಿ ಹೊಲಿದು ಕೊಡುವ ಟೈಲರ್ ಕೆಲಸ ಸಮಾಜದಲ್ಲಿ ಗೌರವಯುತ ವೃತ್ತಿಯಾಗಿದೆ ಎಂದು ಅಮ್ಮ ಫೌಂಡೇಷನ್‌ ಸಂಸ್ಥಾಪಕ, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು.

ಕೊಪ್ಪ: ಪ್ರತಿಯೊಬ್ಬರೂ ಬಳಸುವ ಬಟ್ಟೆಗಳನ್ನು ಆಯಾ ಕಾಲಕ್ಕೆ ಕಾರ್ಯಕ್ರಮಗಳಿಗೆ ಧರಿಸಲು ಅನುಕೂಲವಾಗುವಂತೆ ಹೊಸ ರೂಪ ನೀಡಿ ಹೊಲಿದು ಕೊಡುವ ಟೈಲರ್ ಕೆಲಸ ಸಮಾಜದಲ್ಲಿ ಗೌರವಯುತ ವೃತ್ತಿಯಾಗಿದೆ ಎಂದು ಅಮ್ಮ ಫೌಂಡೇಷನ್‌ ಸಂಸ್ಥಾಪಕ, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು.

ಹರಿಹರಪುರದ ಶ್ರೀ.ಅ.ರಾ.ಸ.ಪ.ಪೂ.ಕಾಲೇಜು ಸಭಾಂಗಣದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಟೈಲರ್ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಶ್ರಮಿಕ ವರ್ಗವೆಂದು ಗುರುತಿಸಿಕೊಂಡಿರುವ ಟೈಲರ್‌ಗಳನ್ನು ಸರ್ಕಾರ ಗುರುತಿಸಿ ಅವರಿಗೆ ಬೇಕಾದ ಸೌಕರ್ಯ ಒದಗಿಸಿಕೊಡುವ ಕೆಲಸವಾಗಬೇಕು. ಟೈಲರ್ಸ್‌ ಅಸೋಸಿಯೇಷನ್ ಮುಖೇನ ವೃತ್ತಿ ಭದ್ರತೆ ಇಲ್ಲದ ಟೈಲರ್ಸ್‌ಗೆ ವೃತ್ತಿ ಭದ್ರತೆ, ಸಾಲ ಸೌಲಭ್ಯ, ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸೌಲಭ್ಯ ಒದಗಿಸುವ ಕೆಲಸವಾಗಬೇಕು ಎಂದರು.

ಅಸಹಾಯಕರನ್ನು ಗುರುತಿಸಿ ಸಹಾಯ, ಸಹಕಾರ ನೀಡಲು ನನ್ನ ತಾಯಿ ಪ್ರೇರಣೆಯಿಂದ ಅವರ ಹೆಸರಿನಲ್ಲಿಯೇ ಅಮ್ಮ ಫೌಂಡೇಶನ್ ಹುಟ್ಟು ಹಾಕಿ ಸಹಕಾರ ನೀಡುತ್ತಿದ್ದೇನೆ. ಇದೀಗ ಮಹಿಳಾ ಸಬಲೀಕರಣ ದೃಷ್ಟಿಯಲ್ಲಿಟ್ಟುಕೊಂಡು ನಿರುದ್ಯೋಗ ಸಮಸ್ಯೆ ಬಗೆಹರಿಸುವ ಸಲುವಾಗಿ ನನ್ನ ತಂದೆ ದಿ.ಸಂಜೀವ ಶೆಟ್ಟರ ಹೆಸರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ರೂಪಿಸಿದ್ದು ಸಾಕಷ್ಟು ಜನ ನಿರುದ್ಯೋಗಿಗಳಿಗೆ ಸಹಾಯಕವಾಗುವಂತೆ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದೇನೆ ಎಂದರು.

ಟೈಲರ್ಸ್‌ ಅಸೋಸಿಯೇಷನ್‌ನಲ್ಲಿ ಟೈಲರ್ಸ್‌ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತರನ್ನು ಗುರುತಿಸಿ ನಮ್ಮ ಫೌಂಡೇಷನ್‌ನಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹಧನ ನೀಡುತ್ತಿದ್ದೇನೆ. ಪ್ರೋತ್ಸಾಹಧನ ಪಡೆದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಜೀವನ ರೂಪಿಸಿಕೊಂಡ ನಂತರ ಆರ್ಥಿಕ ಸಮಸ್ಯೆ ಇರುವ ಇತರೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಲ್ಲಿ ಅಮ್ಮ ಫೌಂಡೇಶನ್ ಕೊಡುಗೆ ಹಿಂದಿರುಗಿಸಿದಂತಾಗುವುದು ಎಂದು ಟೈಲರ್ ಸಮಾವೇಶಕ್ಕೆ ಶುಭಾಶಯ ಕೋರಿದರು.

ಜೆಡಿಎಸ್ ಶೃಂಗೇರಿ ಕ್ಷೇತ್ರಾಧ್ಯಕ್ಷ ಬಿ.ಎಚ್.ದಿವಾಕರ್ ಭಟ್, ಅಮ್ಮ ಫೌಂಡೇಷನ್‌ನ ಸದಸ್ಯರು, ಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಇದ್ದರು.

Share this article