- ತಮ್ಮ ವೇತನದ ಶೇ.10 ಹಣ ಎಂದಿಗೂ ಬಡಮಕ್ಕಳ ಶಿಕ್ಷಣಕ್ಕೆ ಮುಡಿಪು
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬಂದರೂ ಎದೆಗುಂದದೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಲೇ, ಆಸ್ಪತ್ರೆಯಲ್ಲಿದ್ದರೆ ಆನ್ ಲೈನ್‌ನಲ್ಲಿ, ಚಿಕಿತ್ಸೆ ಪಡೆದು ಬಂದ ನಂತರ ಮತ್ತೆ ಎಂದಿನಂತೆ ಶಾಲೆಗೆ ಹೋಗಿ ನೋವಿನಲ್ಲೂ ಮಕ್ಕಳಲ್ಲೇ ದೇವರನ್ನು ಕಾಣುತ್ತಾ, ಬೋಧಿಸುವ ಮೂಲಕ ವೃತ್ತಿಗೆ ಮತ್ತಷ್ಟು ಮೆರಗು ತರುವ ಕೆಲಸವನ್ನು ದಾವಣಗೆರೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಾಡುತ್ತ ಶಿಕ್ಷಕ ವೃತ್ತಿಯ ಗೌರವ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.ದಾವಣಗೆರೆ ವಾಸಿಯಾದ ಎ.ಎಲ್.ನಾಗವೇಣಿ 2022ರಲ್ಲಿ ತಮಗೆ ಕ್ಯಾನ್ಸರ್ 2ನೇ ಹಂತದಲ್ಲಿ ಇರುವುದು ತಿಳಿದಿದ್ದಾರೆ. ಆದರೂ, ಎದೆಗುಂದಲಿಲ್ಲ. ಪತಿ ಎಸ್.ಕೆ.ಪ್ರಹ್ಲಾದ್ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ. ತಂದೆ ಶಿಕ್ಷಕರಾಗಿದ್ದ ದಿವಂಗತ ಎ.ಲಿಂಗಪ್ಪ ಇಲ್ಲಿನ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ. ತಾಯಿಯೂ ಶಿಕ್ಷಕಿಯಾಗಿ ನಿವೃತ್ತಿ ಆದವರು.
ದಾವಣಗೆರೆ ನಿಟುವಳ್ಳಿಯ ಶ್ರೀರಾಮ ಬಡಾವಣೆಯ ಶಾಲೆಯ ಇಂಗ್ಲಿಷ್ ಭಾಷಾ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ನಾಗವೇಣಿಯವರ ಮಕ್ಕಳಿಗೆ ಪಾಠದ ಜೊತೆಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ವಿಜ್ಞಾನ ಪ್ರಯೋಗ, ದೈಹಿಕ ಶಿಕ್ಷಣ, ಇಲಾಖೆ ಪ್ರತಿ ಕಾರ್ಯಕ್ರಮಕ್ಕೂ ಮಕ್ಕಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಕೋವಿಡ್ ವೇಳೆ ಬಡ, ಶ್ರಮಿಕ ಪಾಲಕರ ಪಾಲಿಗೆ ಅನ್ನದಾತೆಯಾಗಿ, ಮಕ್ಕಳಿಗೆ ಅಕ್ಷರದಾತೆ ಆದವರು. ತಮ್ಮ ಮದುವೆ ವೇಳೆ ಪತಿಗೆ ತಮ್ಮ ವೇತನದ ಶೇ.10ರಷ್ಟನ್ನು ಬಡಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡುವ ಮಾತು ಕೊಟ್ಟಂತೆ ಇಂದಿಗೂ ನಾಗವೇಣಿ ನುಡಿದಂತೆ ನಡೆಯುತ್ತಿದ್ದಾರೆ.
2022ರಲ್ಲಿ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಬಂದರೂ ಧೃತಿಗೆಡದೇ ಸೂಕ್ತ ಚಿಕಿತ್ಸೆ ಪಡೆದು ಶಿಕ್ಷಕ ವೃತ್ತಿ ಮುಂದುವರಿಸುತ್ತಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿರುವ ಪ್ರಸಿದ್ಧ ವೈದ್ಯರಿಗೆತೋರಿಸಲು ಬೆಂಗಳೂರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಮಾತನಾಡುತ್ತಾ ತಮ್ಮ ತಂದೆ ಎ.ಲಿಂಗಪ್ಪನವರು ಅಂದಾಗ ತಮ್ಮ ಗುರುಗಳ ಮಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವೈದ್ಯರು ಧನ್ಯತಾಭಾವ ತೋರಿದ್ದು ಗುರು ವೃತ್ತಿ ಬಗ್ಗೆ ನಾಗವೇಣಿಯವರಲ್ಲಿ ಮತ್ತಷ್ಟು ಅಭಿಮಾನ ಮೂಡಿಸಿತು.
ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿಯಾದ ಪತಿ ಎಸ್.ಕೆ. ಪ್ರಹ್ಲಾದ್ ಜೊತೆಗೆ ದಾವಣಗೆರೆಯಲ್ಲಿ ಶಿಕ್ಷಕಿ ನಾಗವೇಣಿ ಇದ್ದು, ಹೈಕೋರ್ಟ್ ಲಾಯರ್ ಆಗಿ ಮಗಳು ಪಿ.ಎನ್.ಪ್ರಾರ್ಥನಾ ಕೆಲಸ ಮಾಡುತ್ತಿದ್ದರೆ, ಮಗ ಪಿ.ಎನ್.ಕಾರ್ತಿಕೇಯನ್ ಬೆಂಗಳೂರಿನಲ್ಲಿ ಬಿಬಿಎ ಓದುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದಾರೆ. 8ನೇ ತರಗತಿ ನಂತರ ಮುಂದೆ ಓದುವ ತಮ್ಮ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಪಿಯುಸಿವರೆಗೆ ತಾವೇ ಶಾಲಾ- ಕಾಲೇಜು ಶುಲ್ಕ ಕಟ್ಟಿ, ನೆರವಾಗುತ್ತಾರೆ. ಬೋಧನೆಯಲ್ಲೂ ವೈಶಿಷ್ಟ್ಯ ಹೊಂದಿರುವ ಎಲ್.ನಾಗವೇಣಿಯವರೆಂದರೆ ಮಕ್ಕಳಿಗೂ ಹೆತ್ತ ತಾಯಿಗಿಂತಲೂ ಹೆಚ್ಚು ಎಂಬಷ್ಟರ ಮಟ್ಟಿಗೆ ಪ್ರೀತಿ, ಸೆಳೆತ.
-2ಕೆಡಿವಿಜಿ10: ದಾವಣಗೆರೆಯ ಸರ್ಕಾರಿ ಶಾಲೆ ಶಿಕ್ಷಕಿ ಎ.ಎಲ್.ನಾಗವೇಣಿ.