ಹಬ್ಬ ಸಂಭ್ರಮದ ನಡುವೆ ಸ್ವಚ್ಛತಾ ಕಾರ್ಯಕ್ಕೆ ಯುವಪಡೆ!

KannadaprabhaNewsNetwork |  
Published : Nov 09, 2026, 02:45 AM IST
ಸಂಗ್ರಹ | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಂದು ಸಸಿಹಿತ್ಲು ಮುಂಡಾ ಬೀಚ್‌ನ ದ್ವಾರದಲ್ಲಿ ಭಾನುವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 140 ಬ್ಯಾಗ್‌ಗಳಷ್ಟು, ಮೂರು ಕ್ವಿಂಟಾಲ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಮೂಡುಬಿದರೆ ; ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಂದು ಸಸಿಹಿತ್ಲು ಮುಂಡಾ ಬೀಚ್‌ನ ದ್ವಾರದಲ್ಲಿ ಭಾನುವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 140 ಬ್ಯಾಗ್‌ಗಳಷ್ಟು, ಮೂರು ಕ್ವಿಂಟಾಲ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲಿಯೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ‘ಹಸಿರು ಸಂವಾದ’ ಅಭಿಯಾನದ ಅಂಗವಾಗಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪರಿಸರವೇ ನಮ್ಮ ಮನೆ. ನಮ್ಮ ಮನೆ-ವಠಾರವನ್ನು ನಮ್ಮ ಸೊತ್ತು ಎಂದು ಭಾವಿಸಿ ಸ್ವಚ್ಛಗೊಳಿಸುವಂತೆ, ಕಡಲ ತೀರ, ರಸ್ತೆ, ನದಿ ಹಾಗೂ ಸಾರ್ವಜನಿಕ ಸ್ಥಳಗಳನ್ನೂ ನಮ್ಮದೇ ಆಸ್ತಿ ಎಂಬ ಭಾವನೆಯಿಂದ ಕಾಪಾಡಬೇಕು. ಸ್ವಚ್ಛತೆ ಒಂದು ದಿನದ ಅಥವಾ ಕೆಲವೇ ಸಂದರ್ಭಗಳ ಚಟುವಟಿಕೆಯಾಗದೆ, ಪ್ರತಿದಿನದ ಜವಾಬ್ದಾರಿಯಾಗಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.ಹಸಿರು ಸಂವಾದ ಅಭಿಯಾನದಡಿ ಈಗಾಗಲೇ ವಿವಿಧೆಡೆ ಹಸಿರು ಗಣೇಶೋತ್ಸವ ಮತ್ತು ಹಸಿರು ನಾಗರ ಪಂಚಮಿಯಂತಹ ಪರಿಸರ ಸ್ನೇಹಿ ಆಚರಣೆಗಳಿಗೆ ಉತ್ತೇಜನ ನೀಡಲಾಗಿದೆ. ಅದೇ ರೀತಿ, ಈ ಬಾರಿಯ ದೀಪಾವಳಿಯನ್ನೂ ಪರಿಸರಕ್ಕೆ ನಮ್ಮ ಕೊಡುಗೆಯಾಗಿ ರೂಪಿಸುವ ಸಣ್ಣ ಪ್ರಯತ್ನ ಇದಾಗಿದೆ. ಹಬ್ಬಗಳ ಆಚರಣೆಯೊಂದಿಗೆ ಪರಿಸರದ ಜವಾಬ್ದಾರಿಯನ್ನೂ ಬೆಸೆಯುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಉಳಿಸಿಕೊಡಬೇಕು ಎಂದರು.

ಹಳೆಯಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಮಾತನಾಡಿ, ಸ್ವಚ್ಛತೆ ಒಂದು ದಿನದ ಕಾರ್ಯಕ್ರಮಕ್ಕೆ ಅಥವಾ ವಿಶೇಷ ಸಂದರ್ಭಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಿರಂತರವಾಗಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಬದ್ಧತೆಯಿದ್ದು, ಅದರ ಭಾಗವಾಗಿಯೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಸಾರ್ವಜನಿಕರು, ಯುವಜನರು ಹಾಗೂ ವಿವಿಧ ಸಂಘ–ಸಂಸ್ಥೆಗಳು ಕೈಜೋಡಿಸಬೇಕು. ಇಂತಹ ಅಭಿಯಾನಗಳು ಕೇವಲ ತ್ಯಾಜ್ಯ ಸಂಗ್ರಹಕ್ಕೆ ಸೀಮಿತವಾಗದೆ, ಸಮಾಜದಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ನಿರಂತರ ಜನಜಾಗೃತಿ ಮೂಡಿಸುವ ಚಳವಳಿಯಾಗಬೇಕು ಎಂದು ತಿಳಿಸಿದರು.

ದೀಪಾವಳಿ ಹಬ್ಬದ ಅಂಗವಾಗಿ ಹಳೆಯಂಗಡಿ ಗ್ರಾಮ ಪಂಚಾಯಿತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ಅಭಿಯಾನದಲ್ಲಿ ಯುವಕ-ಯುವತಿಯರ ಮಂಡಲ ಹಳೆಯಂಗಡಿ, ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಸಸಿಹಿತ್ಲು ಯುವಕ ಮಂಡಲದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಭಗವತಿ ದೇವಸ್ಥಾನ ವತಿಯಿಂದ ಫಲಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ