ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ರೈತಭವನದಲ್ಲಿ ಭಾನುವಾರ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದ ಜೊತೆ ಸಾಗುವವರು ಖುಷಿಯಾಗಿ ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುವ ಮತ್ತು ಒಳಗೊಳ್ಳುವ ಕ್ರಮ ಇಲ್ಲಿನದು. ಇದೊಂದು ಜಾಲದ ರೀತಿಯಲ್ಲಿ ಬೆಸೆಯುವ ಹೋರಾಟವಾಗಿದೆ ಎಂದರು.
ಸುಮನಾ ಎಸ್.ಎನ್ ಮಾತನಾಡಿ, ಉಡುಪಿಯಲ್ಲಿ ಆರಂಭವಾದ ಮಹಿಳಾ ವೇದಿಕೆ ಅಲ್ಲಿನ ಪಬ್ಬುಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ತಡೆಯಲು ಮಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡಲಾಯಿತು. ಬಾಬ್ರಿದೇವಿಯಂತಹ ಮಹಿಳಾ ಪರ ಹೋರಾಟಗಾರರು ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಮೈಸೂರಿನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೆಸರಿನಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡುವಂತೆ ಸಮಾವೇಶ ಮಾಡಲಾಗಿತ್ತು. ರಜಿಯಾ ಎನ್ನುವ ವಿಜ್ಞಾನಿಯೊಬ್ಬರು ಇದರ ನೇತೃತ್ವ ವಹಿಸಿದ್ದು ವಿಶೇಷ. ಇದಾದ ನಂತರ ಬೆಂಗಳೂರು, ಧಾರವಾಡ, ಕೊಪ್ಪಳ, ವಿಜಾಪುರ, ಕೋಲಾರ, ತುಮಕೂರು ಸೇರಿದಂತೆ ಹದಿನೈದು ಜಿಲ್ಲೆಗಳಲ್ಲಿ ಒಕ್ಕೂಟ ಸಮಾವೇಶ ಆಯೋಜಿಸಿದೆ ಎಂದು ವಿವರಿಸಿದರು.ತುಮಕೂರಿನ ಲೇಖಕಿ ಬಾ.ಮ ರಮಾಕುಮಾರಿ ಮಾತನಾಡಿ, ಮಹಿಳಾ ವಿರೋಧಿ ದೌರ್ಜನ್ಯ ಒಕ್ಕೂಟ ಯಾರಿಂದಲೂ ದೇಣಿಗೆ ಸ್ವೀಕರಿಸಿ ಕಾರ್ಯಕ್ರಮ ಮಾಡುವುದಿಲ್ಲ. ಒಕ್ಕೂಟದಲ್ಲಿ ಸದಸ್ಯತ್ವಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ, ಸಹಾಯ ಮಾಡುವವರು ಮಾಡಬಹುದು. ತುಮಕೂರಿನಲ್ಲಿ ನಾವು ಆಯೋಜಿಸಿದ್ದ ಸಮಾವೇಶದ ನಂತರ ತಂದಿದ್ದ ವಿಶೇಷ ಸಂಚಿಕೆ ಎಲ್ಲಾ ಜಿಲ್ಲೆಗಳಿಗೂ ಮಾದರಿಯಾಗುವಂತದ್ದು ಎಂದು ಹೇಳಿದರು.
ಡಾ.ಸಬಿಹಾ ಭೂಮಿಗೌಡ ಮಾತನಾಡಿ, ಚಿತ್ರದುರ್ಗದ ಅನೇಕ ಐತಿಹಾಸಿಕ ಸ್ಥಳಗಳ ಮಾಹಿತಿ ಪಡೆದು ಅಂತಹುಗಳನ್ನೂ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಬಹುದು. ಇಲ್ಲಿನ ಮಹಿಳಾ ಪರ ಧ್ವನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಒಕ್ಕೂಟದ ಯಶಸ್ವಿ ಪಯಣಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದರು.